ಬಂಟ್ವಾಳ: ಕೋಲ ಹಾಗೂ ಅಗೇಲು ಸೇವೆಗೆ ಪ್ರಸಿದ್ದಿ ಪಡೆದಿರುವ ಆರಾಧನಾ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ರವಿವಾರ ಭಕ್ತರಿಂದ 4180 ಅಗೇಲು ಸೇವೆಗಳು ಸಂದಾಯವಾಗಿದೆ; ಇದು ಈ ವರ್ಷದಲ್ಲಿ ಸಂದಾಯವಾದ ಗರಿಷ್ಠ ಸಂಖ್ಯೆಯ ಅಗೇಲು ಸೇವೆಯಾಗಿದೆ. ಹೆಚ್ಚು ಸೇವೆ ಸಂದಾಯವಾದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿತ್ತು.
ಕ್ಷೇತ್ರದಲ್ಲಿ ವಾರದಲ್ಲಿ ಮೂರು ದಿನ ಅಗೇಲು ಸೇವೆ ಸಂದಾಯವಾಗುತ್ತಿದ್ದರೂ ರವಿವಾರ ರಜಾ ದಿನವಾದ ಕಾರಣ ಗರಿಷ್ಠ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಅಗೇಲು ಸೇವೆ ಸಲ್ಲಿಸುತ್ತಾರೆ. ಸಾಮಾನ್ಯ ದಿನಗಳಲ್ಲಿ ಮಧ್ಯಾಹ್ನ 1.30ರ ಬಳಿಕ ಅಗೇಲು ಸೇವೆ ಪ್ರಸಾದ ನೀಡಲು ಆರಂಭಗೊಂಡರೆ ರವಿವಾರ ಹೆಚ್ಚಿನ ಸೇವೆ ಇದ್ದ ಕಾರಣ ಕೊಂಚ ತಡವಾಗಿ ಸಂಜೆಯವರೆಗೂ ಪ್ರಸಾದ ವಿತರಣೆ ಸಾಗಿತು.
ಮಕ್ಕಳ ಶೈಕ್ಷಣಿಕ ಆರಂಭದ ಹಿನ್ನೆಲೆಯಲ್ಲಿ ಅಗೇಲು ಸೇವೆ ಹೆಚ್ಚಾಗಿತ್ತು. ಉತ್ತಮ ಫಲಿತಾಂಶ, ಉತ್ತಮ ಶಿಕ್ಷಣ ಸಂಸ್ಥೆ ಆಯ್ಕೆ, ನಿರೀಕ್ಷಿತ ಕನಸು ಸಾಕಾರಗೊಳ್ಳಲು ಹಾಗೂ ಸಾಕಾರಗೊಂಡ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ ಅಗೇಲು ಸೇವೆ ಸಂದಾಯ ಮಾಡಿದರು.
ಕಳೆದ ವರ್ಷ ಜೂ.22ರಂದು ಆ ವರ್ಷದ ಗರಿಷ್ಠ 3871 ಅಗೇಲು ಸೇವೆ ಸಂದಾಯವಾಗಿತ್ತು. 2024 ರಲ್ಲಿ ಜೂ.2ರಂದು 3908 ಅಗೇಲು ಸೇವೆ ಹಾಗೂ 2023ರಲ್ಲಿ ಜೂ.25ರಂದು 3852 ಅಗೇಲು ಸೇವೆ ಸಂದಾಯವಾಗಿತ್ತು.