ಶಿಸ್ತು, ಪಾಂಡಿತ್ಯದ ಮೂಲಕ ಯಕ್ಷಗಾನಕ್ಕೆ ಹೊಸ ಆಯಾಮ ನೀಡಿದವರು ಡಾ. ರಮಾನಂದ ಬನಾರಿ: ಡಾ. ಪುರುಷೋತ್ತಮ ಬಿಳಿಮಲೆ

ನೀರ್ಚಾಲು: ಯಕ್ಷಗಾನ, ತಾಳಮದ್ದಳೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿರುವ ಕವಿ ಮತ್ತು ಅರ್ಥಧಾರಿ ಡಾ. ರಮಾನಂದ ಬನಾರಿ ಅವರ 85ನೇ ಜನ್ಮವರ್ಷದ ಅಭಿನಂದನಾ ಸಮಾರಂಭ, ಸಾಕ್ಷ್ಯಚಿತ್ರ ಬಿಡುಗಡೆ ಹಾಗೂ ಕನ್ನಡ ಸಾಹಿತ್ಯ–ಸಂಸ್ಕೃತಿ ಸಮ್ಮೇಳನವು ರವಿವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಭವನದಲ್ಲಿ ವೈಭವದಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು, ವೈದ್ಯಕೀಯ ವೃತ್ತಿಯಲ್ಲಿ ಅಗತ್ಯವಾದ ಶಿಸ್ತು ಮತ್ತು ನಿಷ್ಠೆಯನ್ನು ಯಕ್ಷಗಾನ, ತಾಳಮದ್ದಳೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿಯೂ ಅಳವಡಿಸಲು ನಿರಂತರವಾಗಿ ಪ್ರಯತ್ನಿಸಿದವರು ಡಾ. ರಮಾನಂದ ಬನಾರಿ ಎಂದು ಪ್ರಶಂಸಿಸಿದರು.

ಅರ್ಥಧಾರಿಯಾಗಿ ಕಲಾವಿದನಲ್ಲಿ ಇರಬೇಕಾದ ಶಿಸ್ತು, ಭಾಷಾ ಪ್ರೌಢಿಮೆ, ಪುರಾಣ ಪ್ರಜ್ಞೆ ಹಾಗೂ ಅಭಿವ್ಯಕ್ತಿಯ ಸಾಮರ್ಥ್ಯವನ್ನು ಡಾ. ಬನಾರಿ ತಮ್ಮ ಜೀವನ ಮತ್ತು ಕೃತಿಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ ಪಾತ್ರಗಳು ಅನಗತ್ಯ ಮಾತುಗಳಿಂದ ಕೂಡಿರುವುದಿಲ್ಲ. ಅರ್ಥಧಾರಿಯ ಜವಾಬ್ದಾರಿ ಮತ್ತು ಕಲಾತ್ಮಕತೆಯ ಕುರಿತು ಅವರು ರಚಿಸಿರುವ ಕೃತಿಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.

ಕಿಲ್ಲೆಯವರ ಕರ್ಣನ ಅರ್ಥವ್ಯಾಖ್ಯಾನ ಕೇಳಿ ಭಾವುಕರಾಗದವರೇ ಇಲ್ಲ. ಅದೇ ರೀತಿ ಡಾ. ಬನಾರಿ ಅವರ ಕೃಷ್ಣ ಪಾತ್ರವೂ ಸಂಯಮಿತ ಅಭಿವ್ಯಕ್ತಿಯ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಿದೆ. ಕಲಾವಿದನು ಎಲ್ಲವನ್ನೂ ಮಾತಿನ ಮೂಲಕವೇ ಹೇಳಬೇಕಾಗಿಲ್ಲ ಎಂಬುದನ್ನು ಅವರು ತಮ್ಮ ಪ್ರದರ್ಶನಗಳ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಬಿಳಿಮಲೆ ಅಭಿಪ್ರಾಯಪಟ್ಟರು.

ಕಿರಿಕಾಡು ವಿಷ್ಣುಭಟ್ಟರು, ನಾರಾಯಣ ಕಿಲ್ಲೆ, ಶೇಣಿ, ಪೊಳಲಿ ಶಾಸ್ತ್ರಿ ಹಾಗೂ ಮೈಂದಪ್ಪ ರೈ ಅವರಂತಹ ದಿಗ್ಗಜರು ಸಕ್ರಿಯವಾಗಿದ್ದ ಕಾಲ ತಾಳಮದ್ದಳೆಯ ಸುವರ್ಣಯುಗವಾಗಿತ್ತು. ಆ ಸಂದರ್ಭದಲ್ಲಿ ತಾಳಮದ್ದಳೆ ಕಾರ್ಯಕ್ರಮಗಳಿಗೆ ಸಾವಿರಾರು ಪ್ರೇಕ್ಷಕರು ಸೇರುತ್ತಿದ್ದರು ಎಂದು ಅವರು ಸ್ಮರಿಸಿದರು.

ಯಕ್ಷಗಾನದಲ್ಲಿ ಶ್ರುತಿಯ ಮಹತ್ವವನ್ನು ಗಂಭೀರವಾಗಿ ಅಧ್ಯಯನ ಮಾಡಿ ಕಾರ್ಯರೂಪಕ್ಕೆ ತಂದವರಲ್ಲಿ ಡಾ. ಬನಾರಿ ಹಾಗೂ ರಾಘವ ನಂಬಿಯಾರ್ ಪ್ರಮುಖರು. ಕಲಾವಿದನ ಮಾತು, ಚೆಂಡೆ, ಮದ್ದಳೆ, ಭಾಗವತ ಹಾಗೂ ಎದುರಾಳಿಯ ಸಂಭಾಷಣೆಗಳ ಶ್ರುತಿಯೊಂದಿಗೆ ಹೊಂದಾಣಿಕೆಯಾಗಿರಬೇಕು ಎಂಬುದನ್ನು ಅವರು ಪ್ರತಿಪಾದಿಸಿದರು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಮೋಹನ ಕುಂಟಾರು ಮಾತನಾಡಿ, ಕಾಸರಗೋಡು ಗಡಿನಾಡನ್ನು ಸಾಂಸ್ಕೃತಿಕವಾಗಿ ಕರ್ನಾಟಕದೊಂದಿಗೆ ಬೆಸೆಯುವ ಪರಿಕಲ್ಪನೆಯನ್ನು ಬಲವಾಗಿ ಪ್ರತಿಪಾದಿಸಿದವರಲ್ಲಿ ಡಾ. ರಮಾನಂದ ಬನಾರಿ ಪ್ರಮುಖರು. ಅವರ 85ನೇ ಜನ್ಮವರ್ಷದ ಅಂಗವಾಗಿ ಆಯೋಜಿಸಿರುವ ಈ ಕಾರ್ಯಕ್ರಮವೂ ಆ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕುರ ಹಾಗೂ ಕವಯತ್ರಿ ವಿಜಯಲಕ್ಷ್ಮಿ ಶಾನುಭೋಗ್ ಶುಭಾಶಯ ಕೋರಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯ ಕಟ್ಟೆ, ಕಸಾಪ ಗಡಿನಾಡು ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಮಹಾಜನ ವಿದ್ಯಾಸಂಸ್ಥೆಯ ನಿರ್ವಾಹಕ ಜಯದೇವ ಖಂಡಿಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಾ. ಪ್ರವೀಣ್ ರಾಜ್ ನಿರ್ದೇಶನದಲ್ಲಿ ನಿರ್ಮಿತವಾದ ಡಾ. ರಮಾನಂದ ಬನಾರಿ ಅವರ ಸಾಕ್ಷ್ಯಚಿತ್ರ ಹಾಗೂ ಕುಟ್ಟಿಯಾನ ಮುಹಮ್ಮದ್ ಅವರ ‘ಕನಸುಗಳ ಭೂಮಿಗೆ ಯಾತ್ರೆ’ ಕೃತಿಯನ್ನು ಡಾ. ಪುರುಷೋತ್ತಮ ಬಿಳಿಮಲೆ ಅನಾವರಣಗೊಳಿಸಿದರು.

ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಅಭಿನಂದನಾ ಭಾಷಣ ಮಾಡಿದರು. ಕವಿ ಡಾ. ವಸಂತ ಕುಮಾರ ಪೆರ್ಲ ಪ್ರಸ್ತಾವನೆಗೈದರು. ಡಾ. ಮಹೇಶ್ವರಿ ಯು ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!