ಮಂಗಳೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಹವಾನಿಯಂತ್ರಿತ ವ್ಯವಸ್ಥೆ ಉದ್ಘಾಟನೆ

ಮಂಗಳೂರು, ಜೂನ್ 1: ಮಂಗಳೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಅಳವಡಿಸಲಾದ ಸಂಪೂರ್ಣ ಹವಾನಿಯಂತ್ರಿತ (ಎಸಿ) ವ್ಯವಸ್ಥೆಯ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನ್ಯಾಯಾಲಯ ಸಂಕೀರ್ಣದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೂರನೇ ಮಹಡಿಯಲ್ಲಿ ನಡೆಯಿತು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್ ಅವರು ಹವಾನಿಯಂತ್ರಿತ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಹಾಗೂ ಮಳೆಗಾಲ ಎರಡರಲ್ಲೂ ಹವಾನಿಯಂತ್ರಿತ ವ್ಯವಸ್ಥೆಯ ಅಗತ್ಯವಿದೆ. ಉತ್ತಮ ವಾತಾವರಣವಿರುವ ಕಾರ್ಯಸ್ಥಳ ಸಿಬ್ಬಂದಿ ಹಾಗೂ ನ್ಯಾಯಾಂಗ ಅಧಿಕಾರಿಗಳಿಗೆ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ ಎಂದು ಹೇಳಿದರು.

ಜಿಲ್ಲೆಯ ಕೆಲವು ನ್ಯಾಯಾಲಯಗಳಲ್ಲಿ ಈಗಾಗಲೇ ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಲಾಗಿದ್ದು, ಅದೇ ಮಾದರಿಯಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿಯೂ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗೋಪಾಲಕೃಷ್ಣ ಭಟ್, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ, ಉಪಾಧ್ಯಕ್ಷ ಸುಜಿತ್ ಕುಮಾರ್, ಕಾರ್ಯದರ್ಶಿ ಶ್ರೀಧರ ಎಚ್., ಜಂಟಿ ಕಾರ್ಯದರ್ಶಿ ಜ್ಯೋತಿ ಸುವರ್ಣ, ಕೋಶಾಧಿಕಾರಿ ಗಿರೀಶ್ ಶೆಟ್ಟಿ, ಸರ್ಕಾರಿ ಅಭಿಯೋಜಕಿ ಜುಡಿತಾ ಒಲ್ಗಾ ಮಾರ್ಗರೇಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಂಗಳೂರು ನ್ಯಾಯಾಲಯ ಸಂಕೀರ್ಣದ ಐದು ನ್ಯಾಯಾಲಯ ಕೊಠಡಿಗಳಿಗೆ ಈಗಾಗಲೇ ಹವಾನಿಯಂತ್ರಿತ ವ್ಯವಸ್ಥೆ ಅಳವಡಿಸಲಾಗಿದ್ದು, ಮುಂದಿನ ಹಂತದಲ್ಲಿ ಇನ್ನೂ 15 ನ್ಯಾಯಾಲಯ ಕೊಠಡಿಗಳಿಗೆ ಎಸಿ ವ್ಯವಸ್ಥೆ ಅಳವಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!