ಬೆಳ್ತಂಗಡಿ, ಜೂನ್ 2: ಗುರುವಾಯನಕೆರೆಯ ಅಲಾದಿಕೊಟ್ಟಿಗೆ ಪ್ರದೇಶದಲ್ಲಿ ಅಸಹಜ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾದ ಪ್ರಕರಣವು ಕೊಲೆ ಪ್ರಕರಣ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆಯಲಾದ ಆರೋಪಿಗಳನ್ನು ಬೆಳ್ತಂಗಡಿ ಮಿತ್ತಬಾಗಿಲು ನಿವಾಸಿ ಯಶೋಧರ (35), ಕಡಬ ಚಾರ್ವಾಕ ನಿವಾಸಿ ಮೋಹನ್ (30) ಹಾಗೂ ಬೆಳ್ತಂಗಡಿ ಪಡಂಗಡಿ ನಿವಾಸಿ ಇಬ್ರಾಹಿಂ (54) ಎಂದು ಗುರುತಿಸಲಾಗಿದೆ.
ಜೂನ್ 1ರಂದು ಬೆಳಿಗ್ಗೆ ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಯತೀಶ್ ಅವರ ಮೃತದೇಹ ಗುರುವಾಯನಕೆರೆಯ ಅಲಾದಿಕೊಟ್ಟಿಗೆ ಪ್ರದೇಶದಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಅಸಹಜ ಸಾವು ಎಂದು ದಾಖಲಾಗಿದ್ದ ಪ್ರಕರಣದ ಕುರಿತು ಬೆಳ್ತಂಗಡಿ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆಯ ವೇಳೆ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಯತೀಶ್ ಅವರ ಮೇಲೆ ಯಶೋಧರ, ಮೋಹನ್ ಹಾಗೂ ಇಬ್ರಾಹಿಂ ಹಲ್ಲೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿಗಳ ಹಲ್ಲೆಯಿಂದಲೇ ಯತೀಶ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಮೂವರನ್ನೂ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆಯನ್ನು ಬೆಳ್ತಂಗಡಿ ಪೊಲೀಸರು ಮುಂದುವರಿಸಿದ್ದಾರೆ.