ಮಂಗಳೂರು: ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ)ಯ ದಕ್ಷಿಣ ಭಾರತ ಚಾರ್ಟರ್ಡ್ ಅಕೌಂಟೆಂಟ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್ (ಸಿಕಾಸಾ) ಮಂಗಳೂರು ಶಾಖೆಯ ವತಿಯಿಂದ ಜೂನ್ 5 ಮತ್ತು 6ರಂದು ಮಂಗಳೂರಿನ ಟೌನ್ ಹಾಲ್‌ನಲ್ಲಿ ಎರಡು ದಿನಗಳ ‘ಸಿಎ ವಿದ್ಯಾರ್ಥಿಗಳ ರಾಷ್ಟ್ರೀಯ ಸಮ್ಮೇಳನ’ ಆಯೋಜಿಸಲಾಗಿದೆ ಎಂದು ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಹಾಗೂ ಸಮ್ಮೇಳನ ಸಂಯೋಜಕರಾದ ಸಿಎ ಡೇನಿಯಲ್ ಮಾರ್ಕ್ ಪಿರೇರಾ ತಿಳಿಸಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಉತ್ಕೃಷ್ಟ – ಶ್ರೇಷ್ಠತೆಯ ಮೂಲಗಳು: ಜ್ಞಾನವು ತನ್ನ ಮೂಲವನ್ನು ಕಂಡುಕೊಳ್ಳುವ ತಾಣ” ಎಂಬ ಧ್ಯೇಯವಾಕ್ಯದಡಿ ಈ ಬಾರಿಯ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ ಎಂದರು.
ಐಸಿಎಐಯ ಬೋರ್ಡ್ ಆಫ್ ಸ್ಟಡೀಸ್ (ಬಿಒಎಸ್–ಆಪರೇಷನ್ಸ್) ಆಶ್ರಯದಲ್ಲಿ ನಡೆಯಲಿರುವ ಈ ಬೃಹತ್ ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳಿಂದ ನೂರಾರು ಸಿಎ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ವೃತ್ತಿಪರ ಜ್ಞಾನ ಹಾಗೂ ಕೌಶಲ್ಯ ವೃದ್ಧಿಗೆ ಇದು ಮಹತ್ವದ ವೇದಿಕೆಯಾಗಲಿದೆ ಎಂದು ಹೇಳಿದರು.
ಎರಡು ದಿನಗಳ ಸಮ್ಮೇಳನದಲ್ಲಿ ನಾಲ್ಕು ಜ್ಞಾನಾಧಾರಿತ ಅವಧಿಗಳು ಹಾಗೂ ಆರು ಕೌಶಲ್ಯಾಭಿವೃದ್ಧಿ ಅಧಿವೇಶನಗಳು ನಡೆಯಲಿವೆ. ಲೆಕ್ಕಪರಿಶೋಧನೆ, ತೆರಿಗೆ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಬಳಕೆ, ಉದ್ಯಮಶೀಲತೆ, ಜಾಗತಿಕ ಹೂಡಿಕೆ ಮಾರುಕಟ್ಟೆಗಳು, ಮಾನಸಿಕ ಆರೋಗ್ಯ ಹಾಗೂ ವೃತ್ತಿಪರ ಬ್ರ್ಯಾಂಡಿಂಗ್ ಸೇರಿದಂತೆ ಹಲವು ಸಮಕಾಲೀನ ವಿಷಯಗಳ ಕುರಿತು ತಜ್ಞರು ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನದ ಮೊದಲ ದಿನ ಸಂಜೆ 5.30ರಿಂದ 7.30ರವರೆಗೆ ನೋಂದಾಯಿತ ಸಿಎ ವಿದ್ಯಾರ್ಥಿಗಳಿಂದ ಹಾಡುಗಾರಿಕೆ, ನೃತ್ಯ ಹಾಗೂ ವಾದ್ಯ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮದಲ್ಲಿ ಐಸಿಎಐ ಮಾಜಿ ಕೇಂದ್ರ ಮಂಡಳಿ ಸದಸ್ಯ ಹಾಗೂ ದಕ್ಷಿಣ ವಲಯದ ಮಾಜಿ ಅಧ್ಯಕ್ಷ ಸಿಎ ರಾಜೇಶ್ ಶರ್ಮಾ, ಪರೋಕ್ಷ ತೆರಿಗೆ ತಜ್ಞ ಹಾಗೂ ಲೇಖಕ ಸಿಎ ಮಧುಕರ್ ಎನ್. ಹಿರೇಗಂಗೆ, ರಾಷ್ಟ್ರಮಟ್ಟದ ಪ್ರಖ್ಯಾತ ಬೋಧಕರಾದ ಸಿಎ ತರುಣ್ ಜಗದೀಶ್ ಹಾಗೂ ಸಿಎ ಪರೀಕ್ಷಾ ತಂತ್ರಗಳ ತಜ್ಞ ಸಿಎ ಭಾಸ್ಕರ್ ಬೊರಾನಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಸಿಎ ಡೇನಿಯಲ್ ಮಾಹಿತಿ ನೀಡಿದರು.
ಜೂನ್ 5ರಂದು ಬೆಳಿಗ್ಗೆ 9.30ಕ್ಕೆ ಟೌನ್ ಹಾಲ್‌ನಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮ್ಮೇಳನದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ 600 ರೂಪಾಯಿ ನೋಂದಣಿ ಶುಲ್ಕ ನಿಗದಿಪಡಿಸಲಾಗಿದ್ದು, ಆಸಕ್ತರು ಅಧಿಕೃತ ವೆಬ್‌ಸೈಟ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಜಂಟಿ ಸಂಯೋಜಕರು ಹಾಗೂ ಸಿಕಾಸಾ ಮಂಗಳೂರು ಶಾಖೆಯ ಅಧ್ಯಕ್ಷ ಸಿಎ ಗೌರವ್ ರಾಮಚಂದ್ರ ಹೆಗ್ಡೆ, ಐಸಿಎಐ ಮಂಗಳೂರು ಶಾಖೆಯ ಉಪಾಧ್ಯಕ್ಷೆ ಸಿಎ ಮಮತಾ ರಾವ್, ಕಾರ್ಯದರ್ಶಿ ಸಿಎ ಬಾಲಸುಬ್ರಹ್ಮಣ್ಯ ಎನ್., ಸಿಕಾಸಾ ಕೋ-ಆಪ್ಟ್ ಸದಸ್ಯ ಸಿಎ ಬಿ. ಕೃಷ್ಣಾನಂದ ಪೈ, ಖಜಾಂಚಿ ಸಿಎ ನಿತಿನ್ ಬಾಳಿಗಾ ಹಾಗೂ ನಿಕಟಪೂರ್ವ ಅಧ್ಯಕ್ಷ ಸಿಎ ಪ್ರಶಾಂತ್ ಪೈ ಕೆ. ಉಪಸ್ಥಿತರಿದ್ದರು.