ಸೋಮವಾರಪೇಟೆ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಲ್ಮಂಡುವಿನ ಹೋಂಸ್ಟೇಯೊಂದರಲ್ಲಿ ವಾಟರ್ ಹೀಟರ್‌ನಿಂದ ಅನಿಲ ಸೋರಿಕೆಯಾಗಿ ಯುವತಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿ ವಿನೂತ (27) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಆಕೆ ಜಗನ್ನಾಥ್ ಹಾಗೂ ರೇಣುಕಾ ದಂಪತಿಯ ಪುತ್ರಿ.
ತಮ್ಮ ಕಚೇರಿಯ ಸಹೋದ್ಯೋಗಿಗಳೊಂದಿಗೆ ಪ್ರವಾಸಕ್ಕೆ ಬಂದಿದ್ದ ವಿನೂತ ಅವರು ಹೋಂಸ್ಟೇಯಲ್ಲಿ ತಂಗಿದ್ದರು. ಸ್ನಾನ ಮಾಡಲು ಬಾತ್‌ರೂಮ್‌ಗೆ ತೆರಳಿದ್ದ ಅವರು ಬಹಳ ಸಮಯವಾದರೂ ಹೊರಬಾರದ ಹಿನ್ನೆಲೆಯಲ್ಲಿ ಸಹೋದ್ಯೋಗಿಗಳು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅವರು ಬಾತ್‌ರೂಮ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಬಾತ್‌ರೂಮ್‌ನಲ್ಲಿ ಕಿಟಕಿ ಅಥವಾ ಸಮರ್ಪಕ ಗಾಳಿ ಸಂಚಾರದ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ಇದರಿಂದ ವಾಟರ್ ಹೀಟರ್‌ನಿಂದ ಸೋರಿಕೆಯಾದ ವಿಷಾನಿಲ ಹೊರಗೆ ಹೋಗದೆ ಬಾತ್‌ರೂಮ್‌ನಲ್ಲೇ ಸಂಗ್ರಹಗೊಂಡಿದ್ದು, ಉಸಿರುಗಟ್ಟಿದ ಪರಿಣಾಮ ವಿನೂತ ಅವರು ಪ್ರಜ್ಞೆ ತಪ್ಪಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಹೋಂಸ್ಟೇಯ ಸುರಕ್ಷತಾ ಕ್ರಮಗಳು ಹಾಗೂ ವಾಟರ್ ಹೀಟರ್‌ನ ತಾಂತ್ರಿಕ ದೋಷದ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.