ಬೆಳ್ತಂಗಡಿ, ಜೂನ್ 9: ಮಚ್ಚಿನ ಗ್ರಾಮದ ಪಾಳ್ಯರ ಪ್ರದೇಶದಲ್ಲಿ ಪಿಕಪ್ ವಾಹನ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಜೂನ್ 8ರಂದು ನಡೆದಿದೆ.
ಮೃತರನ್ನು ಚಂದಪ್ಪ ಮೂಲ್ಯ (60) ಹಾಗೂ ಡಾಕಯ್ಯ ಗೌಡ ಎಂದು ಗುರುತಿಸಲಾಗಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ಪಿಕಪ್ ವಾಹನವು ಬಳ್ಳಮಂಜ ಕಡೆಯಿಂದ ಪಣಕಜೆ ಕಡೆಗೆ ಸಂಚರಿಸುತ್ತಿದ್ದ ವೇಳೆ, ಪಣಕಜೆಯಿಂದ ಬಳ್ಳಮಂಜ ಕಡೆಗೆ ಬರುತ್ತಿದ್ದ ಡಾಕಯ್ಯ ಗೌಡ ಚಲಾಯಿಸುತ್ತಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮ ಡಾಕಯ್ಯ ಗೌಡ ಹಾಗೂ ಸ್ಕೂಟರ್ ಹಿಂಬದಿ ಸವಾರ ಚಂದಪ್ಪ ಮೂಲ್ಯ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಹಾಗೂ ಸಾರ್ವಜನಿಕರ ನೆರವಿನಿಂದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಕಪ್ ವಾಹನ ಚಾಲಕನ ವಿರುದ್ಧ ಅ.ಕ್ರ. 60/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 281 ಹಾಗೂ 106(1) ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.