ಜೂನ್ 3ರಂದು ಫಾದರ್ ಮುಲ್ಲರ್‌ನಿಂದ ಬೃಹತ್ ಮಾದಕವಸ್ತು ವಿರೋಧಿ ಜಾಗೃತಿ ರ‍್ಯಾಲಿ

ಮಂಗಳೂರು: ಮಾದಕವಸ್ತು ಸೇವನೆ ಹಾಗೂ ವ್ಯಸನದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಂಕನಾಡಿಯ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ವತಿಯಿಂದ ಜೂನ್ 3ರಂದು ಬೆಳಿಗ್ಗೆ 7 ಗಂಟೆಗೆ ಬೃಹತ್ ಮಾದಕವಸ್ತು ವಿರೋಧಿ ಜಾಗೃತಿ ರ‍್ಯಾಲಿಯನ್ನು ಆಯೋಜಿಸಲಾಗಿದೆ ಎಂದು ಡಾ. ಮೈಕಲ್ ಸಾಂತೂ ಮಯರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು, ನರ್ಸಿಂಗ್ ಶಾಲೆ, ನರ್ಸಿಂಗ್ ಕಾಲೇಜು, ಫಿಸಿಯೋಥೆರಪಿ ಕಾಲೇಜು ಹಾಗೂ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿ ಸೇರಿ 3,000ಕ್ಕೂ ಹೆಚ್ಚು ಮಂದಿ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ‘ನಶಾ ಮುಕ್ತ ಭಾರತ’ ಅಭಿಯಾನದಿಂದ ಪ್ರೇರಿತವಾಗಿ ಫಾದರ್ ಮುಲ್ಲರ್ ನಶಾ ಮುಕ್ತ ಕಾರ್ಯಪಡೆ ಸಮಿತಿಗಳನ್ನು ರಚಿಸಿದ್ದು, ಯುವಜನರಲ್ಲಿ ಮಾದಕವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದೆ ಎಂದರು.

ಸಂಸ್ಥೆಯ ನಿರ್ದೇಶಕರಾದ ರೆವ. ಫಾ. ಫಾಸ್ಟಿನ್ ಲೂಕಾಸ್ ಲೋಬೊ ಅವರ ನೇತೃತ್ವದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ 3,000 ಟಿ-ಶರ್ಟ್‌ಗಳು, ಉಪಾಹಾರ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ಉದ್ಯಮಿ-ಸಮಾಜಸೇವಕ ಮೈಕೆಲ್ ಡಿಸೋಜಾ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. ಫಾದರ್ ಮುಲ್ಲರ್ ಚಾಪೆಲ್‌ನಿಂದ ಆರಂಭವಾಗುವ ರ‍್ಯಾಲಿಯು ಫಾದರ್ ಮುಲ್ಲರ್ ವೃತ್ತ, ಕರಾವಳಿ ವೃತ್ತ ಹಾಗೂ ಪಂಪ್‌ವೆಲ್ ವೃತ್ತದ ಪಶ್ಚಿಮ ಭಾಗದ ಮೂಲಕ ಸಾಗಿದು ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ ಮಾರ್ಗವಾಗಿ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ.

ಮೆರವಣಿಗೆಯೊಂದಿಗೆ ಮಾದಕವಸ್ತು ವಿರೋಧಿ ನೇರ ನಾಟಕ ಪ್ರದರ್ಶನದ ವಿಶೇಷ ಜಾಗೃತಿ ವಾಹನ ಸಂಚರಿಸಲಿದೆ. ರ‍್ಯಾಲಿಗೆ ಪೂರ್ವಭಾವಿಯಾಗಿ ಘೋಷವಾಕ್ಯ ಬರವಣಿಗೆ ಹಾಗೂ ಸಾಮಾಜಿಕ ಜಾಲತಾಣ ರೀಲ್ಸ್ ಸ್ಪರ್ಧೆಗಳನ್ನು ನಡೆಸಲಾಗಿದ್ದು, ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. “ಡ್ರಗ್ಸ್‌ಗೆ ಇಲ್ಲ ಎನ್ನಿ, ಜೀವನ–ಆರೋಗ್ಯ–ಭರವಸೆಯನ್ನು ಆಯ್ಕೆ ಮಾಡಿ” ಎಂಬ ಸಂದೇಶದೊಂದಿಗೆ ಸಮಾಜವನ್ನು ಮಾದಕವಸ್ತು ಮುಕ್ತಗೊಳಿಸಲು ಸಂಸ್ಥೆ ಕರೆ ನೀಡಿದೆ ಎಂದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!