ಕಾಸರಗೋಡು, ಜೂನ್ 4: ಹಲಸು ಹಾಗೂ ಮಾವು ಪ್ರಿಯರಿಗಾಗಿ ಸಪ್ತಭಾಷಾ ಸಂಗಮ ನೆಲ ಕಾಸರಗೋಡಿನಲ್ಲಿ ಜುಲೈ 4 ಮತ್ತು 5ರಂದು ಎರಡು ದಿನಗಳ ‘ಹಲಸು ಮತ್ತು ಮಾವು ಮೇಳ’ ಆಯೋಜಿಸಲಾಗಿದೆ.
ಕೋಟೆಕಣಿಯ ಜೀವಾಸ್ ಮಾನಸ ಆಡಿಟೋರಿಯಂನಲ್ಲಿ ನಡೆಯಲಿರುವ ಈ ಮೇಳದಲ್ಲಿ ಹಲಸು ಮತ್ತು ಮಾವಿನ ವಿವಿಧ ತಳಿಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದ್ದು, ಇವುಗಳಿಂದ ತಯಾರಿಸಲಾದ ವೈವಿಧ್ಯಮಯ ಆಹಾರ ಉತ್ಪನ್ನಗಳ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಲಿದೆ.
ಮೇಳದಲ್ಲಿ ಸ್ಥಳೀಯ ಕೃಷಿ ಉತ್ಪನ್ನಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ರೈತರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರೊಂದಿಗೆ ಕೃಷಿಕರು, ಉದ್ಯಮಿಗಳು ಮತ್ತು ಸಾರ್ವಜನಿಕರ ನಡುವೆ ಕೃಷಿ, ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ವಿಚಾರ ವಿನಿಮಯ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.
ಆಯೋಜಕರು ನೀಡಿರುವ ಮಾಹಿತಿಯ ಪ್ರಕಾರ, ಮೇಳವು ರೈತರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದು, ಸ್ಥಳೀಯ ಹಣ್ಣುಗಳ ಪ್ರೋತ್ಸಾಹಕ್ಕೆ ವೇದಿಕೆಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ 9447101195 ಹಾಗೂ 9388849933 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.
ಮೇಳವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.