ಕಾಸರಗೋಡು: ದಕ್ಷಿಣ ಕನ್ನಡ ಜಿಲ್ಲೆಯ ರಾಮಕ್ಷತ್ರಿಯ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ “ಭರವಸೆಯ ಬೆಳಕು (Light of Hopes) – Student Achievement Award 2026” ಹಾಗೂ “ಭರವಸೆಯ ಶಿಕ್ಷಣ ರತ್ನ (Light of Hopes – Teachers Achievement Award 2026)” ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.90 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ ರಾಮಕ್ಷತ್ರಿಯ ಸಮಾಜದ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಭರವಸೆ ಮೂಡಿಸಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂದ್ಯಾ ರಾಣಿ ಅವರ ಸ್ಥಾಪಕತ್ವದ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.223/2008), ಕನ್ನಡ ಭವನ ಪ್ರಕಾಶನ, ನುಳ್ಳಿಪ್ಪಾಡಿ, ಕಾಸರಗೋಡು ಇದರ ಪ್ರಯೋಜಕತ್ವದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಅದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ರಾಮಕ್ಷತ್ರಿಯ ಸಮಾಜದ ಪ್ರತಿಭಾವಂತ ಶಿಕ್ಷಕರಿಗೂ “ಭರವಸೆಯ ಶಿಕ್ಷಣ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಸ್ತುತ ಸೇವೆಯಲ್ಲಿರುವ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ. ರವೀಂದ್ರ ಜೆಪ್ಪು, ಅಧ್ಯಕ್ಷೆ ರೇಖಾ ಸುದೇಶ್ ರಾವ್ ಹಾಗೂ ಕಾರ್ಯಾಧ್ಯಕ್ಷ ಉಮೇಶ್ ರಾವ್ ಕುಂಬ್ಳೆ ಅವರ ನೇತೃತ್ವದಲ್ಲಿ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜುಲೈ 15, 2026ರಂದು ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯ ಸಭಾಂಗಣದಲ್ಲಿ ನಡೆಯಲಿದೆ.
ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ, ಹೆಸರು, ವಿಳಾಸ ಹಾಗೂ ಭಾವಚಿತ್ರವನ್ನು ಸಲ್ಲಿಸಬೇಕು. ಶಿಕ್ಷಕರು ಹೆಸರು, ವಿಳಾಸ, ಕಾರ್ಯನಿರ್ವಹಿಸುತ್ತಿರುವ ಶಾಲೆ ಅಥವಾ ಶಿಕ್ಷಣ ಸಂಸ್ಥೆಯ ವಿವರ ಹಾಗೂ ಭಾವಚಿತ್ರವನ್ನು ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಜೂನ್ 30, 2026 ಕೊನೆಯ ದಿನಾಂಕವಾಗಿದ್ದು, ಮೊದಲು ಸಂಪೂರ್ಣ ವಿವರಗಳೊಂದಿಗೆ ಅರ್ಜಿ ಸಲ್ಲಿಸುವ 30 ಮಂದಿಯನ್ನು ಪ್ರಶಸ್ತಿ ಆಯ್ಕೆ ಸಮಿತಿ ಆಯ್ಕೆ ಮಾಡಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ. ವಾಮನ್ ರಾವ್ ಬೇಕಲ್ (ಮೊ. 9037173400) ಹಾಗೂ ರೇಖಾ ಸುದೇಶ್ ರಾವ್ (ಮೊ. 9481978620) ಅವರನ್ನು ಸಂಪರ್ಕಿಸಬಹುದು.