ಅಂದರ್-ಬಾಹರ್ ಜೂಜಾಟದ ಮೇಲೆ ಪೊಲೀಸರ ದಾಳಿ: 7 ಮಂದಿ ಬಂಧನ, ₹13 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತು ಜಪ್ತಿ

ಹೆಬ್ರಿ, ಜೂನ್ 9: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಹೊಸೂರು ಪ್ರದೇಶದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಹೆಬ್ರಿ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.

ಜೂಜಾಟ ನಡೆಯುತ್ತಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಈ ವೇಳೆ ಚಪ್ಪರ ಹಾಗೂ ಟಾರ್ಪಾಲ್ ಅಡಿಯಲ್ಲಿ ಟೇಬಲ್ ಸುತ್ತ ಕುಳಿತು ಹಣ ಪಣಕ್ಕೊಡ್ಡಿ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದರು.

ದಾಳಿಯ ವೇಳೆ ವಿಜೇಶ್ ಕುಮಾರ್ (40), ದಸ್ತಗೀರ್ (33) ಹಾಗೂ ರೋಹಿತ್ (34) ಅವರನ್ನು ಸ್ಥಳದಲ್ಲೇ ಬಂಧಿಸಲಾಯಿತು. ಜೂಜಾಟಕ್ಕೆ ಬಳಸಲಾಗುತ್ತಿದ್ದ ₹23,970 ನಗದು, ಸುಮಾರು ₹35 ಸಾವಿರ ಮೌಲ್ಯದ ಐದು ಮೊಬೈಲ್ ಫೋನ್‌ಗಳು, ಇಸ್ಪೀಟ್ ಕಾರ್ಡ್‌ಗಳು, ಟೇಬಲ್, ಕುರ್ಚಿಗಳು, ಬ್ಯಾಟರಿ ಹಾಗೂ ಇತರ ವಿದ್ಯುತ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ ಜೂಜಾಟಕ್ಕೆ ಆಗಮಿಸಲು ಬಳಸಿದ್ದ ಮೂರು ಕಾರುಗಳು, ಎರಡು ಮೋಟಾರ್‌ಸೈಕಲ್‌ಗಳು ಹಾಗೂ ಒಂದು ಸ್ಕೂಟರ್‌ನ್ನು ಕೂಡ ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ನಗದು, ವಾಹನಗಳು ಹಾಗೂ ಇತರ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹13.07 ಲಕ್ಷ ಎಂದು ಅಂದಾಜಿಸಲಾಗಿದೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು, ದಾಳಿ ವೇಳೆ ಪರಾರಿಯಾಗಿದ್ದ ವಿಜಯ (39), ಮಹೇಶ್ (26), ಕಿಶೋರ್ ಕುಮಾರ್ (46) ಹಾಗೂ ಸಂತೋಷ್ ಆಚಾರ್ಯ (35) ಅವರನ್ನು ಬಳಿಕ ಬಂಧಿಸಿದ್ದಾರೆ.

ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!