ಬಂಟ್ವಾಳದಲ್ಲಿ ಶಾಲಾ ಬಸ್‌ಗಳ ಮೇಲೆ ಟ್ರಾಫಿಕ್ ಪೊಲೀಸರ ದಾಳಿ: ಒಂದೇ ದಿನ 20 ಪ್ರಕರಣ ದಾಖಲು

ಬಂಟ್ವಾಳ, ಜೂ. 10: ಶಾಲಾ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಖಾಸಗಿ ಶಾಲಾ ಬಸ್‌ಗಳು ಕಾನೂನು ಹಾಗೂ ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಲು ಬಂಟ್ವಾಳ ಟ್ರಾಫಿಕ್ ಎಸ್.ಐ. ಆದರ್ಶ್ ನೇತೃತ್ವದ ತಂಡ ವಿಶೇಷ ತಪಾಸಣೆ ನಡೆಸಿತು.

ಬೆಳಿಗ್ಗೆ 6 ಗಂಟೆಯಿಂದಲೇ ಬಿಸಿರೋಡು ವೃತ್ತದ ಬಳಿ ಹೆದ್ದಾರಿ ಬದಿಯಲ್ಲಿ ಶಾಲಾ ಬಸ್‌ಗಳನ್ನು ನಿಲ್ಲಿಸಿ ದಾಖಲೆಗಳು, ಸುರಕ್ಷತಾ ವ್ಯವಸ್ಥೆಗಳು ಹಾಗೂ ಇತರೆ ನಿಯಮಗಳ ಪಾಲನೆ ಕುರಿತು ಪರಿಶೀಲನೆ ನಡೆಸಲಾಯಿತು.

ನಿಯಮ ಉಲ್ಲಂಘಿಸಿದ ಬಸ್‌ಗಳು ಮತ್ತು ಚಾಲಕರ ವಿರುದ್ಧ ಒಟ್ಟು 20 ಪ್ರಕರಣಗಳನ್ನು ದಾಖಲಿಸಲಾಗಿದೆ. ಯೂನಿಫಾರ್ಮ್ ಧರಿಸದೆ ವಾಹನ ಚಲಾಯಿಸಿದ ಆರು ಚಾಲಕರು, ನಿಗದಿತ ಸೀಟುಗಳಿಗಿಂತ ಹೆಚ್ಚು ಮಕ್ಕಳನ್ನು ಸಾಗಿಸುತ್ತಿದ್ದ ನಾಲ್ಕು ಬಸ್‌ಗಳು, ಫಿಟ್‌ನೆಸ್ ಪ್ರಮಾಣಪತ್ರ ಅವಧಿ ಮುಗಿದ ಒಂದು ಬಸ್ ಸೇರಿದಂತೆ ದಾಖಲಾತಿಗಳ ಕೊರತೆ ಕಂಡುಬಂದ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಶಾಲಾ ವಾಹನಗಳಲ್ಲಿ ಜಿಪಿಎಸ್ ಟ್ರ್ಯಾಕಿಂಗ್, ಸಿಸಿಟಿವಿ, ಸ್ಪೀಡ್ ಗವರ್ನರ್, ಸುರಕ್ಷತಾ ಗ್ರಿಲ್, ಅಟೆಂಡರ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ, ತುರ್ತು ನಿರ್ಗಮನ ವ್ಯವಸ್ಥೆ ಸೇರಿದಂತೆ ಇಲಾಖೆಯ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಸ್.ಐ. ಆದರ್ಶ್ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಚಾಲಕರು ಹೆಚ್ಚಿನ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಮಕ್ಕಳ ಸುರಕ್ಷತೆಯನ್ನು ಕಡೆಗಣಿಸಿ ನಿಯಮ ಉಲ್ಲಂಘಿಸುವ ಶಾಲಾ ಬಸ್ ಹಾಗೂ ಚಾಲಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!