ಬಂಟ್ವಾಳ, ಜೂ. 10: ಮಳೆ ಬಂದಾಗ ರಸ್ತೆಗಳ ನೈಜ ಸ್ಥಿತಿ ಹೊರಬೀಳುವುದು ಸಾಮಾನ್ಯ. ಆದರೆ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರವೇ ದುಸ್ತರವಾದಾಗ ಸಾರ್ವಜನಿಕರ ಆಕ್ರೋಶ ಹೆಚ್ಚಾಗುವುದು ಸಹಜ. ಇದೇ ರೀತಿಯ ದುಸ್ಥಿತಿಯೊಂದು ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಳಕಟ್ಟೆ ಬಳಿಯ ದೂಮಳಿಕೆ ರಸ್ತೆಯಲ್ಲಿ ಕಂಡುಬಂದಿದೆ.
ಬಂಟ್ವಾಳ–ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ದೂಮಳಿಕೆ ರಸ್ತೆ ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿಯ ಸ್ಪರ್ಶ ಕಾಣದೆ ಹೊಂಡಗಳ ಸಾಗರವಾಗಿ ಮಾರ್ಪಟ್ಟಿದೆ. ಗ್ರಾಮ ಪಂಚಾಯತ್ ಕಚೇರಿಯ ಮುಂಭಾಗದಲ್ಲೇ ಹಾದುಹೋಗುವ ಈ ರಸ್ತೆಯ ದುಸ್ಥಿತಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸುಮಾರು 500ಕ್ಕೂ ಅಧಿಕ ನಿವೇಶನಗಳ ನಿವಾಸಿಗಳು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಹಿರಿಯ ನಾಗರಿಕರು ಈ ರಸ್ತೆಯನ್ನೇ ದೈನಂದಿನ ಸಂಚಾರಕ್ಕೆ ಅವಲಂಬಿಸಿದ್ದಾರೆ. ಆದರೆ ರಸ್ತೆಯುದ್ದಕ್ಕೂ ನಿರ್ಮಾಣವಾಗಿರುವ ದೊಡ್ಡ ಹೊಂಡಗಳು, ಕೆಸರು ಮತ್ತು ಕಲ್ಲುಗಳಿಂದ ವಾಹನ ಸಂಚಾರ ಅಪಾಯಕಾರಿಯಾಗಿದ್ದು, ಸಾರ್ವಜನಿಕರು ಪ್ರತಿನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.
ಕಳೆದ 12 ವರ್ಷಗಳಿಂದ ರಸ್ತೆಗೆ ಸಮರ್ಪಕ ಡಾಮರೀಕರಣ ನಡೆದಿಲ್ಲ ಎನ್ನಲಾಗಿದೆ. ಪರಿಣಾಮವಾಗಿ ರಸ್ತೆಯ ಅಸ್ತಿತ್ವವೇ ಕಣ್ಮರೆಯಾಗಿದ್ದು, ಹೊಂಡಗಳ ಮಧ್ಯೆ ರಸ್ತೆ ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರುಗದ್ದೆಯಾಗಿ ಬದಲಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವುದು ಸಾಮಾನ್ಯವಾಗಿದೆ.
ತಾಲೂಕಿನ ಇತರ ಪ್ರದೇಶಗಳಲ್ಲಿ ರಸ್ತೆಗಳು ಕಾಂಕ್ರೀಟೀಕರಣಗೊಂಡು ಉತ್ತಮ ಸೌಲಭ್ಯ ಪಡೆದಿದ್ದರೂ, ಪಂಚಾಯತ್ ಕಚೇರಿ ಎದುರಿನ ಈ ರಸ್ತೆ ಮಾತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ ಹೊಂಡಗಳಿಗೆ ಮಣ್ಣು ಹಾಕುವ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗುತ್ತಿದ್ದು, ಮಳೆ ಬಂದ ಕೂಡಲೇ ರಸ್ತೆ ಮತ್ತೆ ಹಳೆಯ ಸ್ಥಿತಿಗೆ ಮರಳುತ್ತಿದೆ.
ಶಾಲೆಗಳು ಆರಂಭವಾಗಿರುವುದರಿಂದ ಸಮಸ್ಯೆ ಮತ್ತಷ್ಟು ತೀವ್ರಗೊಂಡಿದೆ. ಮಕ್ಕಳು ಇದೇ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದ್ದು, ಇಳಿಜಾರು ಪ್ರದೇಶಗಳಲ್ಲಿ ಜಾರಿ ಬೀಳುವ ಘಟನೆಗಳು ಹೆಚ್ಚಾಗಿವೆ. ಪಾದಚಾರಿಗಳ ಮೇಲೆ ವಾಹನಗಳಿಂದ ಕೆಸರು ಚಿಮ್ಮುವುದು ಸಾಮಾನ್ಯವಾಗಿದ್ದು, ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ಸೇವಾ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ.
ಸ್ಥಳೀಯ ನಿವಾಸಿ ಮಹಮ್ಮದ್ ಇಸಾಕ್ ಮಾತನಾಡಿ, “ಈ ಸಮಸ್ಯೆ ಇಂದಿನದ್ದಲ್ಲ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ಮಳೆ ಬಂದರೆ ರಸ್ತೆ ಕೆಸರುಗದ್ದೆಯಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಮತ್ತು ಹಿರಿಯರನ್ನು ಆಸ್ಪತ್ರೆಗೆ ಕರೆದೊಯ್ಯಲು ತುಂಬಾ ಕಷ್ಟವಾಗುತ್ತಿದೆ. ಮಾರುಕಟ್ಟೆಗೆ ಹೋಗಲು ಇದೇ ರಸ್ತೆಯನ್ನು ಬಳಸಬೇಕಾಗಿದ್ದು, ವಾಹನಗಳು ಹಾದುಹೋದಾಗ ಕೆಸರು ಚಿಮ್ಮಿ ಬಟ್ಟೆಗಳು ಮಣ್ಣಾಗುತ್ತವೆ. ಶಾಶ್ವತ ಕಾಮಗಾರಿ ಕೈಗೊಳ್ಳದಿದ್ದರೆ ಸಮಸ್ಯೆ ಮುಂದುವರಿಯಲಿದೆ,” ಎಂದು ತಮ್ಮ ಅಳಲು ತೋಡಿಕೊಂಡರು.
ಸಾವಿರಾರು ಜನರ ದೈನಂದಿನ ಬದುಕಿಗೆ ಸಂಬಂಧಿಸಿದ ಈ ರಸ್ತೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಶಾಶ್ವತ ಕಾಮಗಾರಿ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.