ಜಂಕ್ಷನ್‌, ವೃತ್ತಗಳಲ್ಲಿ ಸುಗಮ ಸಂಚಾರಕ್ಕೆ ತ್ವರಿತ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ದರ್ಶನ್ ಸೂಚನೆ

ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಜಂಕ್ಷನ್‌ಗಳು ಮತ್ತು ವೃತ್ತಗಳಲ್ಲಿ ಸುಗಮ ವಾಹನ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಸಂಬಂಧಿತ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಮುಖ ಜಂಕ್ಷನ್‌ಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ಅಕ್ರಮ ಪಾರ್ಕಿಂಗ್, ಒತ್ತುವರಿ ಮತ್ತು ಬೀದಿ ವ್ಯಾಪಾರದಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವ ಕುರಿತು ಸಾರ್ವಜನಿಕರಿಂದ ಹಲವು ದೂರುಗಳು ಬಂದಿರುವುದಾಗಿ ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳು, ಪ್ರಾದೇಶಿಕ ಸಾರಿಗೆ ಇಲಾಖೆ (ಆರ್‌ಟಿಒ) ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ಸಂಚಾರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವಿದ್ ಅಝ್ಮಿ ಮಾತನಾಡಿ, ಹಳೆಯಂಗಡಿಯಿಂದ ತಲಪಾಡಿವರೆಗಿನ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಜಂಕ್ಷನ್‌ಗಳು ಮತ್ತು ವೃತ್ತಗಳಲ್ಲಿ ಸಂಚಾರ ನಿಯಂತ್ರಣಕ್ಕಾಗಿ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆ, ಝೀಬ್ರಾ ಕ್ರಾಸಿಂಗ್ ಗುರುತು, ವೇಗ ನಿಯಂತ್ರಕಗಳ ಸ್ಥಾಪನೆ ಸೇರಿದಂತೆ ವಾಹನ ಸಂಚಾರ ಹಾಗೂ ಸಾರ್ವಜನಿಕರ ಸುರಕ್ಷಿತ ಓಡಾಟಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಪಘಾತಗಳಿಗೆ ಕಾರಣವಾಗುತ್ತಿದ್ದ ಹಲವು ಡಿವೈಡರ್ ಕ್ರಾಸಿಂಗ್‌ಗಳನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರು.

ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್ ಕಾಮಗಾರಿ ಪ್ರಗತಿಯಲ್ಲಿದ್ದು, ನಂತೂರು ಜಂಕ್ಷನ್ ಅಗಲೀಕರಣ ಹಾಗೂ ಕೆಪಿಟಿಯಿಂದ ನಂತೂರುವರೆಗಿನ ಸರ್ವಿಸ್ ರಸ್ತೆ ಕಾಮಗಾರಿಯೂ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಸಮಿತಿ ಸದಸ್ಯರು ಕಲ್ಲಾಪು, ಜೆಪ್ಪಿನಮೊಗರು ಹಾಗೂ ತೊಕ್ಕೊಟ್ಟು ಜಂಕ್ಷನ್‌ಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಅತಿಕ್ರಮಿಸಿ ನಡೆಯುತ್ತಿರುವ ವ್ಯಾಪಾರ ಚಟುವಟಿಕೆಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!