ಮಂಗಳೂರು, ಜೂ. 10: ಮುಂಗಾರು ಮಳೆಯ ಆರಂಭದಲ್ಲೇ ನಗರದ ಜಪ್ಪಿನಮೊಗರು ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿ ಸುಮಾರು ಆರು ಅಂಗಡಿಗಳಿಗೆ ಹಾನಿ ಸಂಭವಿಸಿದೆ. ಒಂದೆರಡು ದಿನಗಳ ಮಳೆಯಲ್ಲೇ ಶಾಲೆಯ ಸಮೀಪದ ಪ್ರದೇಶ ಜಲಾವೃತಗೊಂಡು ಅಂಗಡಿಗಳೊಳಗೆ ನೀರು ನುಗ್ಗಿ ವ್ಯಾಪಾರಿಗಳಿಗೆ ನಷ್ಟ ಉಂಟಾಗಿದೆ.
ಪಕ್ಕದ ತೋಡಿಗೆ ಮಣ್ಣು ತುಂಬಿ ನೀರಿನ ಸಹಜ ಹರಿವಿಗೆ ಅಡ್ಡಿಯಾಗಿರುವುದೇ ಸಮಸ್ಯೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರತೀ ಮಳೆಗಾಲದಲ್ಲೂ ಇದೇ ಸಮಸ್ಯೆ ಮರುಕಳಿಸುತ್ತಿದ್ದು, ಹಲವು ಬಾರಿ ದೂರು ನೀಡಿದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೆರೆಯಿಂದ ಎಲೆಕ್ಟ್ರಿಕಲ್ ಹಾಗೂ ಗ್ಯಾರೇಜ್ ಅಂಗಡಿಗಳಲ್ಲಿದ್ದ ವಸ್ತುಗಳು, ದುರಸ್ತಿಗಾಗಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ರಾತ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಅಂಗಡಿಗಳೊಳಗಿನ ನೀರನ್ನು ಹೊರತೆಗೆದರು. ಆದರೆ ತೋಡಿಗೆ ಹಾಕಿರುವ ಮಣ್ಣನ್ನು ಇನ್ನೂ ತೆರವುಗೊಳಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಮಹಾನಗರ ಪಾಲಿಕೆ ತಕ್ಷಣ ಸಮಸ್ಯೆ ಬಗೆಹರಿಸಿ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಜಪ್ಪಿನಮೊಗರು ನಿವಾಸಿಗಳು ಹಾಗೂ ವ್ಯಾಪಾರಿಗಳು ಆಗ್ರಹಿಸಿದ್ದಾರೆ.