ಸುಳ್ಯದಲ್ಲಿ ಕಾಡಾನೆಗಳ ದಾಳಿ: ಕೃಷಿ ತೋಟಗಳಿಗೆ ಭಾರೀ ಹಾನಿ

ಮಂಗಳೂರು/ಸುಳ್ಯ, ಜೂ.10: ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗೂನಡ್ಕ ಪರಿಸರದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಮಂಗಳವಾರ ತಡರಾತ್ರಿ 8ರಿಂದ 10 ಕಾಡಾನೆಗಳ ಬೃಹತ್ ಹಿಂಡು ಕೃಷಿ ತೋಟಗಳಿಗೆ ನುಗ್ಗಿ ಭಾರೀ ಪ್ರಮಾಣದ ಬೆಳೆ ಹಾನಿ ಉಂಟುಮಾಡಿದೆ.

ಅರಣ್ಯ ಗಡಿಯಿಂದ ಹೊರಬಂದ ಕಾಡಾನೆಗಳ ಹಿಂಡು ಏಕಾಏಕಿ ನಾಡು ಪ್ರದೇಶದ ತೋಟಗಳತ್ತ ದಾಳಿ ನಡೆಸಿದ ಪರಿಣಾಮ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಆನೆಗಳನ್ನು ತಡೆಯಲು ಗ್ರಾಮಸ್ಥರು ತಕ್ಷಣ ಕಾರ್ಯಾಚರಣೆಗೆ ಇಳಿದು, ಪಟಾಕಿ ಸಿಡಿಸುವುದು ಹಾಗೂ ಜೋರಾಗಿ ಶಬ್ದ ಮಾಡುವ ಮೂಲಕ ಕಾಡಿನತ್ತ ಓಡಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ರೈತರ ಪ್ರಯತ್ನಗಳನ್ನು ಲೆಕ್ಕಿಸದೆ ಕಾಡಾನೆಗಳು ತೋಟಗಳೊಳಗೆ ನುಗ್ಗಿ ಕೃಷಿ ಬೆಳೆಗಳನ್ನು ತುಳಿದು ನಾಶಪಡಿಸಿದ್ದು, ಹಲವು ರೈತರಿಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕಾಡಾನೆಗಳನ್ನು ಮರಳಿ ಅರಣ್ಯದತ್ತ ಓಡಿಸುವ ಕಾರ್ಯಾಚರಣೆಯನ್ನು ಇಲಾಖೆ ಸಿಬ್ಬಂದಿ ತೀವ್ರಗೊಳಿಸಿದ್ದಾರೆ.

ಈ ಭಾಗದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಶಾಶ್ವತ ಪರಿಹಾರಕ್ಕಾಗಿ ಅರಣ್ಯ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪರಿಸರವಾದಿಗಳು, ಕಾಡಾನೆಗಳ ಸಾಂಪ್ರದಾಯಿಕ ಸಂಚಾರ ಮಾರ್ಗ ಹಾಗೂ ಆವಾಸ ಪ್ರದೇಶಗಳಲ್ಲಿ ಮಾನವ ವಸತಿ ಮತ್ತು ಕೃಷಿ ಚಟುವಟಿಕೆಗಳು ವಿಸ್ತರಿಸುತ್ತಿರುವುದೇ ಇಂತಹ ಮಾನವ-ವನ್ಯಜೀವಿ ಸಂಘರ್ಷಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ

SHARE
Loading spinner

Leave a Reply

Your email address will not be published. Required fields are marked *

error: Content is protected !!