ಮಂಗಳೂರು, ಜೂ.11: ಅಧಿಕ ಮಾಸದ ಪವಿತ್ರ ಪರಮ ಏಕಾದಶಿ ಪ್ರಯುಕ್ತ ಮಂಗಳೂರಿನ ವಿ.ಟಿ. ರಸ್ತೆಯ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದಲ್ಲಿ ಭಕ್ತಿ, ಸಂಭ್ರಮ ಹಾಗೂ ವೈಭವ ಮನೆ ಮಾಡಿದೆ.
ಶ್ರೀ ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ಪರಮ ಏಕಾದಶಿಯ ಅಂಗವಾಗಿ ದೇವಳವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ದೇವರಿಗೆ ಪ್ರಿಯವಾದ ವಿವಿಧ ತರಕಾರಿ, ಹಣ್ಣು-ಹಂಪಲು ಹಾಗೂ ಸುಂದರ ಪುಷ್ಪಗಳಿಂದ ಸಿಂಗಾರಗೊಂಡಿರುವ ಶ್ರೀ ವಿಠೋಭ ರುಕುಮಾಯಿ ದೇವರ ದಿವ್ಯ ಅಲಂಕಾರ ಭಕ್ತರನ್ನು ಆಕರ್ಷಿಸುತ್ತಿದೆ.
ಬೆಳಿಗ್ಗೆಯಿಂದಲೇ ವಿವಿಧ ಭಜನಾ ಮಂಡಳಿಗಳ ಸಂಕೀರ್ತನೆಯ ನಾದದೊಂದಿಗೆ ದೇವಳದಲ್ಲಿ ಭಕ್ತರ ದಂಡು ಹರಿದು ಬರುತ್ತಿದೆ. ವಿಶೇಷ ಪೂಜೆ, ಭಜನೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ರಾತ್ರಿ 9 ಗಂಟೆಯವರೆಗೆ ನಡೆಯಲಿದ್ದು, ಭಕ್ತರಿಗೆ ದೇವರ ದರ್ಶನ ಮತ್ತು ಅನುಗ್ರಹ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಪರಮ ಏಕಾದಶಿಯ ಈ ಶುಭ ಸಂದರ್ಭದಲ್ಲಿ ಭಕ್ತರು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ವಿಠೋಭ ರುಕುಮಾಯಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.