ಬಂಟ್ವಾಳ, ಜೂ.11: ಕರ್ತವ್ಯದಲ್ಲಿದ್ದ ವೇಳೆ ಮೆಸ್ಕಾಂ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಶಂಭೂರು–ಕುಂದಾಯಗೋಳಿ ಪ್ರದೇಶದಲ್ಲಿ ನಡೆದಿದೆ.
ಮೂಲತಃ ಮಿತ್ತೂರು ನಿವಾಸಿ ಚಂದ್ರಶೇಖರ ನಾಯ್ಕ (55) ಮೃತ ದುರ್ದೈವಿ. ಅವರು ಮೆಸ್ಕಾಂ ಪಾಣೆಮಂಗಳೂರು ಶಾಖೆಯಲ್ಲಿ ಸಹಾಯಕ ಮೆಕ್ಯಾನಿಕ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮಧ್ಯಾಹ್ನ ವೇಳೆ ಶಂಭೂರು ಸಮೀಪದ ಕುಂದಾಯಗೋಳಿಯಲ್ಲಿ ವಿದ್ಯುತ್ ಕಂಬ ತುಂಡಾಗಿ ಬಿದ್ದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ್ದ ಚಂದ್ರಶೇಖರ ನಾಯ್ಕ ಅವರು ಸಹೋದ್ಯೋಗಿಗಳೊಂದಿಗೆ ಕಂಬ ಅಳವಡಿಸಿ, ವಿದ್ಯುತ್ ತಂತಿಗಳನ್ನು ಎಳೆದು ಸಂಪರ್ಕ ಮರುಸ್ಥಾಪನೆ ಮಾಡಿದ್ದರು.
ಬಳಿಕ ಇಲಾಖೆಗೆ ಸಂಬಂಧಿಸಿದ ಮತ್ತೊಂದು ತುರ್ತು ಸಮಸ್ಯೆ ಕುರಿತು ಕರೆ ಬಂದ ಹಿನ್ನೆಲೆ ಸಿಬ್ಬಂದಿಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಕುಂದಾಯಗೋಳಿ ಬಳಿ ಅಸ್ವಸ್ಥಗೊಂಡು ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಬಿಸಿರೋಡಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಪರೀಕ್ಷಿಸಿದಾಗ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತ ಚಂದ್ರಶೇಖರ ನಾಯ್ಕ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಅಗಲಿದ್ದಾರೆ.