ಮಂಗಳೂರು, ಜೂ.12: ಕರಾವಳಿಯಲ್ಲಿ ಮುಂಗಾರು ಮಳೆ ತೀವ್ರಗೊಳ್ಳುತ್ತಿದ್ದಂತೆ ಸಮುದ್ರದ ಅಲೆಗಳ ಅಬ್ಬರವೂ ಹೆಚ್ಚಾಗಿದ್ದು, ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿವೆ. ಜಿಲ್ಲೆಯ ಪ್ರಮುಖ ಬೀಚ್ಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಸಮುದ್ರ ಆಧಾರಿತ ಎಲ್ಲಾ ಸಾಹಸ ಹಾಗೂ ಮನರಂಜನಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪ್ರವಾಸಿಗರ ನೆಚ್ಚಿನ ತಾಣಗಳಾದ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ ಸೇರಿದಂತೆ ಜಿಲ್ಲೆಯ ಎಲ್ಲಾ ಬೀಚ್ಗಳಲ್ಲಿ ಮುಂಗಾರು ಅವಧಿ ಮುಗಿಯುವವರೆಗೆ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ತೇಲುವ ಸೇತುವೆ, ಬೋಟಿಂಗ್, ಜೆಟ್ ಸ್ಕೀ, ಪ್ಯಾರಾಸೈಲಿಂಗ್ ಸೇರಿದಂತೆ ಸಮುದ್ರ ಆಧಾರಿತ ಯಾವುದೇ ಸಾಹಸ ಕ್ರೀಡೆಗಳಿಗೆ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರ ಜೀವಕ್ಕೆ ಯಾವುದೇ ರೀತಿಯ ಅಪಾಯ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
ಬೀಚ್ ಪ್ರದೇಶಗಳಲ್ಲಿ ಸುರಕ್ಷತಾ ವ್ಯವಸ್ಥೆಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಸಮುದ್ರಕ್ಕೆ ಯಾರೂ ಇಳಿಯದಂತೆ ದಡದ ಬಳಿ ಹಗ್ಗದ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ನಿಯಮ ಉಲ್ಲಂಘಿಸಿ ನೀರಿಗೆ ಇಳಿಯಲು ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಪರಿಸ್ಥಿತಿಯ ಮೇಲೆ ನಿಗಾ ಇಡಲು ಲೈಫ್ಗಾರ್ಡ್ ಸಿಬ್ಬಂದಿ, ಕರಾವಳಿ ಕಾವಲುಪಡೆ ಹಾಗೂ ಸ್ಥಳೀಯ ಪೊಲೀಸರನ್ನು ನಿಯೋಜಿಸಲಾಗಿದ್ದು, ಬೀಚ್ ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ಕಣ್ಗಾವಲು ನಡೆಸಲಾಗುತ್ತಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಬೀಚ್ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ವಿಧಿಸದಿದ್ದರೂ, ಸಮುದ್ರದ ನೀರಿಗೆ ಇಳಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಕರಾವಳಿಗೆ ಭೇಟಿ ನೀಡುವವರು ಸುರಕ್ಷಿತ ಪ್ರದೇಶಗಳಲ್ಲಿ ನಿಂತು ಅಥವಾ ಕುಳಿತು ಮುಂಗಾರು ಅಲೆಗಳ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.