ಹೃದಯಸ್ಪರ್ಶಿಯಾಗಿ ನಡೆದ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ

ಭಟ್ಕಳ: ಮುರುಡೇಶ್ವರದ ಪಟ್ರಗದ್ದೆಯಲ್ಲಿ ಮಂಗಳವಾರ ಪೌಷ್ಟಿಕ ಆಹಾರ ಸಪ್ತಾಹದ ವಿಶೇಷ ಕಾರ್ಯಕ್ರಮ ಹೃದಯಸ್ಪರ್ಶಿಯಾಗಿ ನಡೆಯಿತು.

ಕಾರ್ಯಕ್ರಮದ ವಿಶೇಷತೆಯೆಂದರೆ, ಮಹಿಳೆಯರು ತಮ್ಮ ಮನೆಗಳಲ್ಲಿಯೇ ತಯಾರಿಸಿಕೊಂಡು ತಂದ ವಿವಿಧ ಬಗೆಯ ಪೌಷ್ಟಿಕ ಆಹಾರಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶಿಸಿದ್ದು. ಇದು ಬೈಲೂರು ವಲಯ ಮಟ್ಟದ ಕಾರ್ಯಕ್ರಮವಾಗಿದ್ದರಿಂದ ವಲಯದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಮಾಜಿಕ ಪರಿಶೋಧನಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಇದೊಂದು ಹೃದಯಗಳ ಸಂಗಮದ ಕಾರ್ಯಕ್ರಮ. ಇಲ್ಲಿ ಅಬ್ಬರ, ಆಡಂಬರಕ್ಕಿಂತ ಆತ್ಮೀಯತೆ ಮತ್ತು ಪ್ರೀತಿಗೆ ಹೆಚ್ಚಿನ ಮಹತ್ವವಿದೆ” ಎಂದರು.

ಈ ಸಂದರ್ಭದಲ್ಲಿ ಪುಟ್ಟ ಕಂದಮ್ಮ ತನೀಷ ಕೇಸವ ನಾಯ್ಕ ಅವರಿಗೆ ಅನ್ನಪ್ರಾಶನ ನೆರವೇರಿಸಿ, “ಈ ಕಂದಮ್ಮಗೆ ಭಗವಂತನು ದೀರ್ಘಾಯುಷ್ಯ, ಉತ್ತಮ ಆರೋಗ್ಯ ಹಾಗೂ ಜೀವನದಲ್ಲಿ ಅತ್ಯಂತ ಯಶಸ್ಸು ಕರುಣಿಸಲಿ” ಎಂದು ಹಾರೈಸಿದರು.

ನಂತರ ಗರ್ಭಿಣಿ ಹೇಮಾ ಈಶ್ವರ ನಾಯ್ಕ ಅವರಿಗೆ ಮಹಿಳೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿ ಸೀಮಂತ ಕಾರ್ಯಕ್ರಮ ನೆರವೇರಿಸಿ, ಉಡಿ ತುಂಬಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾವಳ್ಳಿ–1 ಪಂಚಾಯಿತಿ ಸಿಬ್ಬಂದಿಗಳಾದ ಉಮೇಶ ದೇವು ಪಟಗಾರ, ಗಜಾನನ ಗೊಂಡ, ಗ್ರಾಮ ಸಂಪನ್ಮೂಲ ವ್ಯಕ್ತಿ ಶಿಲ್ಪಾ ನಾಯ್ಕ, ಅಂಗನವಾಡಿ ಮೇಲ್ವಿಚಾರಕಿ ಕಾಮಾಕ್ಷಿ ಗೌಡ, ಭಾರತಿ ನಾಯ್ಕ, ಮೀನಾಕ್ಷಿ ಹರಿಕಾಂತ, ಹೇಮಲತಾ ದೇವಾಡಿಗ, ಜ್ಯೋತಿ ನಾಯ್ಕ ಹಾಗೂ ಅಂಗನವಾಡಿ ಸಹಾಯಕಿಯರು ಉಪಸ್ಥಿತರಿದ್ದರು.

ಸರಳತೆ, ಆತ್ಮೀಯತೆ ಹಾಗೂ ಪೌಷ್ಟಿಕ ಆಹಾರದ ಮಹತ್ವವನ್ನು ಸಾರಿದ ಕಾರ್ಯಕ್ರಮವು ಭಾಗವಹಿಸಿದವರ ಮನದಲ್ಲಿ ಹೃದಯಸ್ಪರ್ಶಿ ನೆನಪಾಗಿ ಉಳಿಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!