ಸಿಎಂ ಡಿ ಕೆ ಶಿವಕುಮಾರ್ ಗೆ ಹಣಕಾಸು ಇಲಾಖೆ ಎಚ್ಚರಿಕೆ !

ಬೆಂಗಳೂರು: ರಾಜ್ಯದ ಸೀಮಿತ ಆರ್ಥಿಕ ಸಂಪನ್ಮೂಲಗಳ ಹಿನ್ನೆಲೆಯಲ್ಲಿ ಹೊಸ ಯೋಜನೆಗಳು ಹಾಗೂ ಕಾಮಗಾರಿಗಳನ್ನು ಘೋಷಿಸುವಾಗ ವಾಸ್ತವಿಕತೆಯನ್ನು ಗಮನದಲ್ಲಿಟ್ಟುಕೊಳ್ಳುವಂತೆ ಹಣಕಾಸು ಇಲಾಖೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದೆ ಎಂದು ವರದಿಯಾಗಿದೆ. ಸೆ.17ರಂದು ಸಿದ್ಧಪಡಿಸಲಾದ ಆಂತರಿಕ ಟಿಪ್ಪಣಿಯಲ್ಲಿ 2026-27 ಮತ್ತು 2027-28ನೇ ಸಾಲಿನಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕೆಲವು ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿಲ್ಲ ಎಂದು ಇಲಾಖೆ ಗಮನಸೆಳೆದಿದೆ.

ಈ ಯೋಜನೆಗಳಿಗೆ ಪ್ರತ್ಯೇಕವಾಗಿ ಹಣ ಮೀಸಲಿಡದಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಹಣಕಾಸು ನಿರ್ವಹಣೆಗೆ ತೊಂದರೆ ಉಂಟಾಗುವ ಸಾಧ್ಯತೆಯಿದೆ ಎಂದು ಹಣಕಾಸು ಇಲಾಖೆ ಸೂಚಿಸಿದೆ. ಹೊಸ ಯೋಜನೆಗಳಿಗೆ ಅನುದಾನ ಒದಗಿಸುವ ಮೊದಲು ಹೆಚ್ಚುವರಿ ಆದಾಯದ ಮೂಲಗಳನ್ನು ಕಂಡುಕೊಳ್ಳುವ ಅಗತ್ಯವನ್ನೂ ಇಲಾಖೆ ಒತ್ತಿಹೇಳಿದೆ.

2026-27ನೇ ಸಾಲಿನಲ್ಲಿ ಕರ್ನಾಟಕದ ವಿತ್ತೀಯ ಕೊರತೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (GSDP) ಶೇ.2.95ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಇದು ಕರ್ನಾಟಕ ಹಣಕಾಸು ಹೊಣೆಗಾರಿಕೆ ಕಾಯ್ದೆಯಡಿ ನಿಗದಿಪಡಿಸಿರುವ ಶೇ.3ರ ಮಿತಿಗೆ ಅತ್ಯಂತ ಸಮೀಪದಲ್ಲಿದೆ. ಇದೇ ಅವಧಿಯಲ್ಲಿ ಆದಾಯ ಕೊರತೆ 22,957 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ರಾಜ್ಯದ ಒಟ್ಟು ಬಾಕಿ ಹೊಣೆಗಾರಿಕೆಗಳು GSDPಯ ಶೇ.24.94ರಷ್ಟಿರಲಿವೆ. ಇದು ಶೇ.25ರ ಮಿತಿಗೆ ಸಮೀಪದಲ್ಲಿದೆ.

ರಾಜ್ಯದ ಹಣಕಾಸಿನ ಮೇಲೆ ವೇತನ, ಪಿಂಚಣಿ, ಬಡ್ಡಿ ಪಾವತಿ ಹಾಗೂ ವಿವಿಧ ಸಬ್ಸಿಡಿ ಯೋಜನೆಗಳ ವೆಚ್ಚವೂ ಒತ್ತಡ ಉಂಟುಮಾಡುತ್ತಿದೆ. 2026-27ನೇ ಸಾಲಿನಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ 51,286 ಕೋಟಿ ರೂ. ಮೀಸಲಿಡಲಾಗಿದೆ ಎಂದು ಬಜೆಟ್ ವಿಶ್ಲೇಷಣೆ ತಿಳಿಸಿದೆ.

ಇದರ ನಡುವೆ ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆಗೆ ಹೆಚ್ಚುವರಿ ವೆಚ್ಚದ ಒತ್ತಡ ಎದುರಾಗುವ ಸಾಧ್ಯತೆಯಿದೆ. ಹೊಸ ಯೋಜನೆಗಳಿಗೆ ಹಣಕಾಸು ಒದಗಿಸುವ ಮುನ್ನ ಲಭ್ಯವಿರುವ ಸಂಪನ್ಮೂಲ ಹಾಗೂ ಈಗಾಗಲೇ ಇರುವ ವೆಚ್ಚದ ಬಾಧ್ಯತೆಗಳನ್ನು ಪರಿಗಣಿಸಬೇಕು ಎಂಬ ಸಂದೇಶವನ್ನು ಹಣಕಾಸು ಇಲಾಖೆ ನೀಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!