ಗ್ಯಾಸ್ ಬೆಲೆ ಏರಿಕೆ ಖಂಡಿಸಿ ವಿಮೆನ್ ಇಂಡಿಯಾ ಮೂವ್‌ಮೆಂಟ್ ಪ್ರತಿಭಟನೆ

ಬಿಸಿ ರೋಡ್, ಜೂನ್ 12: ಗ್ಯಾಸ್ ಸಿಲಿಂಡರ್‌ಗಳ ನಿರಂತರ ಬೆಲೆ ಏರಿಕೆ ಹಾಗೂ ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ, ವಿಮೆನ್ ಇಂಡಿಯಾ ಮೂವ್‌ಮೆಂಟ್ (WIM) ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯು ಬಿಸಿ ರೋಡ್ ಫ್ಲೈಓವರ್ ಕೆಳಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು.

ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿ, ಗೃಹಬಳಕೆಯ ಗ್ಯಾಸ್ ದರವನ್ನು ಕಡಿಮೆಗೊಳಿಸುವಂತೆ ಹಾಗೂ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸಿಲಿಂಡರ್ ವಿತರಣೆ ಮಾಡುವಂತೆ ಆಗ್ರಹಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಹಿದಾ ತಸ್ನೀಂ ಮಾತನಾಡಿ ,
ಕೇಂದ್ರ ಬಿಜೆಪಿ ಸರ್ಕಾರವು ಮಹಿಳೆಯರ ,ಬಡವರ ಶೋಷಣೆಯೇ ದೇಶದ ಅಭಿವೃದ್ದಿ ಎಂದು ಪರಿಗಣಿಸಿದೆ. ನಿರಂತರವಾದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಜನವಿರೋಧಿ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರಕ್ಕೆ ಅಧಿಕಾರದಲ್ಲಿರಲು ಯಾವ ಅರ್ಹತೆಯೂ ಇಲ್ಲ
ಎಂದು ಆಕ್ರೋಶ ವ್ಯಕ್ತಪಡಿಸಿದರು.

SDPI ಜಿಲ್ಲಾ ಸಮಿತಿ ಸದಸ್ಯೆ ಝೀನತ್ ಗೂಡಿನಬಳಿ ಮಾತನಾಡಿ , ವಿಶ್ವ ಗುರುವಿನ ಟೈಟಲ್ ನಲ್ಲಿ ಮೋದಿ ಸರ್ಕಾರವು ಕಾರ್ಪೋರೇಟ್ ಕುಲಗಳನ್ನು ಅಭಿವೃದ್ದಿಗೊಳಿಸಿ ಬಡವರನ್ನು ಮತ್ತಷ್ಟು ಬಡತನಕ್ಕೆ ತಳ್ಳುವ ವಂಚನೆಯ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು .

ಮಹಿಳೆಯರು ಬ್ಯಾನರ್ ಹಾಗೂ ಫಲಕಗಳನ್ನು ಪ್ರದರ್ಶಿಸಿ, ಗ್ಯಾಸ್ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಬದುಕಿನ ಮೇಲೆ ಭಾರೀ ಹೊರೆ ಬೀಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಬೆಲೆ ನಿಯಂತ್ರಣ ಮತ್ತು ಸುಗಮ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

WIM ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಶಿನೀರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನ ಪಾಣೆಮಂಗಳೂರು ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಸದಸ್ಯೆ ಸಾಜಿದಾ ಸ್ವಾಗತಿಸಿ, ಫಾತಿಮಾ ನುಸೈಬಾ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!