ಕಾಸರಗೋಡು: ಮೇರು ಕವಿ ಶ್ರೀಕೃಷ್ಣಯ್ಯ ಅನಂತಪುರ ಅವರನ್ನು 2026ನೇ ಸಾಲಿನ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಅವರ ಸಾರಥ್ಯದಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ–2026’ರ ಅಂಗವಾಗಿ ಅಕ್ಟೋಬರ್ 18ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ‘ಕಾಸರಗೋಡು ದಸರಾ ಕವಿ ಸಮ್ಮೇಳನ’ದಲ್ಲಿ ಶ್ರೀಕೃಷ್ಣಯ್ಯ ಅನಂತಪುರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.

ಸಾಹಿತ್ಯ ಸಂಘಟಕ ಬಿ. ಶ್ರೀನಿವಾಸ್ ಬಹಾದ್ದೂರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಕವಿ ಸಮ್ಮೇಳನವನ್ನು ಚುಟುಕು ಬ್ರಹ್ಮ, ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ. ಎಂ.ಜಿ.ಆರ್. ಅರಸ್ ಮೈಸೂರು ಉದ್ಘಾಟಿಸಲಿದ್ದಾರೆ. ಮೈಸೂರಿನ ಖ್ಯಾತ ಕವಿ, ಸಾಹಿತ್ಯ ರತ್ನ ಜಯಪ್ಪ ಹೊನ್ನಾಳಿ (ಜಯ ಕವಿ ಮೈಸೂರು) ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಲಿದೆ.
ರಾಷ್ಟ್ರಮಟ್ಟದ 75 ಮಂದಿ ಕವಿಗಳು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ 21 ಮಂದಿ ಕವಿಶ್ರೇಷ್ಠರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ–2026’ ನೀಡಿ ಗೌರವಿಸಲಾಗುವುದು ಎಂದು ಕಾಸರಗೋಡು ದಸರಾ ಸಂಚಾಲಕ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಮತ್ತು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಹ್ಮಣ್ಯ ದೇವಸ್ಥಾನದ ಸಾಂಸ್ಕೃತಿಕ ಘಟಕದ ಅಧ್ಯಕ್ಷ ಪಾಂಗೋಡು ಪ್ರವೀಣ್ ನಾಯಕ್ ಅವರು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

