ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಸೂಚನೆ

ಮಂಗಳೂರು, ಜೂನ್ 21ರಂದು ನಡೆಯಲಿರುವ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ಯಶಸ್ವಿಯಾಗಿ ಆಚರಿಸಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ರಾಜು ಕೆ. ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗವು ದೇಹ ಮತ್ತು ಮನಸ್ಸಿನ ನಡುವಿನ ಸಮತೋಲನವನ್ನು ಕಾಪಾಡುವ ಮಹತ್ವದ ಸಾಧನವಾಗಿದ್ದು, ಅದರ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ಹೇಳಿದರು.

ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲಾಡಳಿತ, ಆಯುಷ್ ಇಲಾಖೆ, ಆಯುಷ್ ಮಹಾವಿದ್ಯಾಲಯಗಳು, ವಿವಿಧ ಯೋಗ ಸಂಘಟನೆಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಮಂಗಳೂರಿನ ಪುರಭವನದ ಮಿನಿ ಸಭಾಂಗಣದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.

ಯೋಗ ದಿನಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರು, ಸ್ವಚ್ಛತೆ, ತುರ್ತು ವೈದ್ಯಕೀಯ ನೆರವು ಹಾಗೂ ವಾಹನ ನಿಲುಗಡೆ ಸೇರಿದಂತೆ ಅಗತ್ಯ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಜನ ಸಂಘಟನೆಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳುವ ಅಗತ್ಯವಿದ್ದು, ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಯೋಗ ದಿನಾಚರಣೆಯ ಯಶಸ್ವಿ ಆಯೋಜನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!