ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಹೆಸರು ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ಬಹುಭಾಷಾ ನಟ Prakash Raj ಪ್ರತಿಕ್ರಿಯೆ ನೀಡಿದ್ದು, ಗಾಳಿಮಾತುಗಳು ಹಾಗೂ ದುರುದ್ದೇಶಪೂರ್ವಕವಾಗಿ ಹರಡಲಾಗುತ್ತಿರುವ ಊಹಾಪೋಹಗಳನ್ನು ನಂಬದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಗ್ಗೆ ಕೆಲವು ಸುದ್ದಿಗಳು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
“ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಕೋಟ್ಯಂತರ ಭಕ್ತರ ನಂಬಿಕೆಗೆ ಸಂಬಂಧಿಸಿದ ಪ್ರಕರಣವಾಗಿದೆ. ಹೀಗಾಗಿ ಈ ಕುರಿತು ಮೂಡಿರುವ ಅನುಮಾನಗಳಿಗೆ ಉತ್ತರಿಸುವುದು ನನ್ನ ಕರ್ತವ್ಯವಾಗಿದೆ. ಪ್ರಸ್ತುತ ನಾನು ಹೊರ ಊರಿನಲ್ಲಿದ್ದು, ಇನ್ನೆರಡು ದಿನಗಳಲ್ಲಿ ಸ್ವತಃ ಮಾಧ್ಯಮಗಳ ಮುಂದೆ ಹಾಜರಾಗಿ ಈ ಬಗ್ಗೆ ಸ್ಪಷ್ಟನೆ ನೀಡುತ್ತೇನೆ” ಎಂದು ಹೇಳಿದ್ದಾರೆ.
ಅಲ್ಲಿಯವರೆಗೆ ಗಾಳಿಮಾತುಗಳನ್ನು ಹಾಗೂ ಕೆಲವರು ಈ ಸುದ್ದಿಗೆ ಸೇರಿಸಲು ಪ್ರಯತ್ನಿಸುತ್ತಿರುವ ಸುಳ್ಳು ಆರೋಪಗಳನ್ನು ನಂಬಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣದ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ನಿರ್ದೇಶನ ನೀಡುವಂತೆ ಕೋರಿ ಚಿನ್ನ ಅಲಿಯಾಸ್ ಚಿನ್ನಯ್ಯ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಪ್ರಕಾಶ್ ರಾಜ್ ಅವರ ಹೆಸರೂ ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.