ಮಂಗಳೂರು: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಮತ್ತೋರ್ವ ಪ್ರಮುಖ ಆರೋಪಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಝಾಕೀರ್ ಸವಣೂರು (35) ಜಾಮೀನು ಪಡೆದ ಆರೋಪಿಯಾಗಿದ್ದು, ಪ್ರಕರಣದ 18ನೇ ಆರೋಪಿಯಾಗಿ ಗುರುತಿಸಲಾಗಿದ್ದಾನೆ. ಪ್ರವೀಣ್ ನೆಟ್ಟಾರ್ ಹತ್ಯೆ ಸಂಚಿನಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಗಳ ಪೈಕಿ ಈತನೂ ಒಬ್ಬನಾಗಿದ್ದಾನೆ.
ಪ್ರಕರಣದ ತನಿಖೆ ಆರಂಭವಾದ ಸಂದರ್ಭದಲ್ಲೇ ಬಂಧಿಸಲ್ಪಟ್ಟ ಪ್ರಮುಖ ಶಂಕಿತರಲ್ಲಿ ಝಾಕೀರ್ ಸವಣೂರು ಕೂಡ ಸೇರಿದ್ದ. 2022ರ ಜುಲೈ 28ರಂದು ಬೆಳ್ಳಾರೆಯ ಶಫೀಕ್ ಜೊತೆ ಈತನನ್ನು ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದರು.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ಝಾಕೀರ್ ಸವಣೂರು ವಿರುದ್ಧ ಗಂಭೀರ ಆರೋಪಗಳು ದಾಖಲಾಗಿದ್ದು, ಇದೀಗ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.