ಮಂಗಳೂರು, ಜೂ.12: ಪೂಜಾ ಆಚಾರ್ಯ ಹಾಗೂ ಕೃಷ್ಣ ಜೆ. ರಾವ್ ನಡುವಿನ ವಿವಾದಿತ ಪ್ರಕರಣಕ್ಕೆ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ಜೂನ್ 19ರಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯಲಿರುವ ಮಧ್ಯಸ್ಥಿಕೆ ಸಭೆಯಲ್ಲಿ ಪ್ರಕರಣ ಸುಖಾಂತ್ಯ ಕಾಣುವ ವಿಶ್ವಾಸವಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗು ಮತ್ತು ತಾಯಿಯ ಆರೈಕೆಗಾಗಿ ಪ್ರತಿ ತಿಂಗಳು ₹75 ಸಾವಿರ ನೀಡುವಂತೆ ಹೈಕೋರ್ಟ್ ಆದೇಶಿಸಿದ್ದು, ಈಗಾಗಲೇ ₹75 ಸಾವಿರ ಬಿಡುಗಡೆ ಹಾಗೂ ಮತ್ತೊಂದು ₹75 ಸಾವಿರವನ್ನು ನಾಲ್ಕು ದಿನಗಳೊಳಗೆ ಜಮಾ ಮಾಡಲು ಸೂಚಿಸಲಾಗಿದೆ ಎಂದು ಹೇಳಿದರು.
ಜೂನ್ 19ರಂದು ಹಿರಿಯ ವಕೀಲೆ ಸುಶೀಲ ಅವರ ಸಮ್ಮುಖದಲ್ಲಿ ಮಧ್ಯಸ್ಥಿಕೆ ನಡೆಯಲಿದ್ದು, ಅಂದೇ ಮಗುವಿನ ನಾಮಕರಣ ನಡೆಯುವ ಸಾಧ್ಯತೆ ಇದೆ. ಜೂನ್ 30ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.
ಪೂಜಾ ಮತ್ತು ಮಗುವಿಗೆ ನ್ಯಾಯ ದೊರಕಬೇಕು ಎಂಬುದು ನಮ್ಮ ಆಶಯವಾಗಿದ್ದು, ಕೃಷ್ಣ ಜೆ. ರಾವ್ ಕುಟುಂಬ ಸಂಧಾನದತ್ತ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ನಂಜುಂಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಲಗ್ಗರೆ ರವಿಕುಮಾರ್, ಜನಾರ್ದನ ಆಚಾರ್ಯ, ಲೋಕೇಶ್ ಕಿಟ್ಟಣ್ಣಿ, ಜಗದೀಶ್ ವೀಣೆ, ಗಂಗಾಧರ ಆಚಾರ್ಯ, ಗೋಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.