ಕಾಸರಗೋಡು: ಕಾಸರಗೋಡು ಜಿಲ್ಲೆ ರಚನೆಯಾಗಿ 44 ವರ್ಷಗಳ ಸುದೀರ್ಘ ಅವಧಿಯ ನಂತರ, ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಸರಗೋಡಿನವರೇ ಆದ ಐಪಿಎಸ್ ಅಧಿಕಾರಿಯೊಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಅಪರೂಪದ ವಿದ್ಯಮಾನ ಕಾಸರಗೋಡಿನ ಜನತೆಯಲ್ಲಿ ವಿಶೇಷ ಸಂಭ್ರಮ ಹಾಗೂ ಹೆಮ್ಮೆಯನ್ನು ಮೂಡಿಸಿದೆ.
ಕಾಞಂಗಾಡಿನ ರಾವಣೇಶ್ವರಂನ ಕಳರಿಕಾಲ್ ನಿವಾಸಿ ಪಿ. ನಿತಿನ್ ರಾಜ್, ಈಗ ಕಾಸರಗೋಡಿನ ನೂತನ ಪೊಲೀಸ್ ಮುಖ್ಯಸ್ಥ. 2018ರ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 210ನೇ ರ್ಯಾಂಕ್ ಗಳಿಸಿ ಐಪಿಎಸ್ ಪಡೆದ ಇವರು, ಈ ಹಿಂದೆ ಕಣ್ಣೂರು ಸಿಟಿ ಪೊಲೀಸ್ ಕಮಿಷನರ್ ಆಗಿ ಸಮರ್ಥವಾಗಿ ಸೇವೆ ಸಲ್ಲಿಸಿದ್ದರು. ರಾವಣೇಶ್ವರ ಸರಕಾರಿ ಹೈಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಿತಿನ್ ರಾಜ್, ಇದೀಗ ತಾವೇ ಹುಟ್ಟಿ ಬೆಳೆದ ನೆಲಕ್ಕೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮರಳಿರುವುದು ವಿಶೇಷ.
ಕೋಟಯಂ ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಪದವಿ ಪಡೆದ ನಿತಿನ್ ರಾಜ್, ನಂತರ ಪೊಲೀಸ್ ಸೇವೆಯತ್ತ ಮುಖ ಮಾಡಿದರು. ವಯನಾಡಿನಲ್ಲಿ ಅಸಿಸ್ಟೆಂಟ್ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ವೃತ್ತಿಜೀವನ ಆರಂಭಿಸಿದ ಇವರು, ಬಳಿಕ ತಿರುವನಂತಪುರಂ ಸಿಟಿ ಪೊಲೀಸ್ ಕಮಿಷನರ್ ಸೇರಿದಂತೆ ಹಲವು ಮಹತ್ವದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಪೊಲೀಸ್ ಸಮವಸ್ತ್ರದ ಹಿಂದಿರುವ ನಿತಿನ್ ರಾಜ್ ಒಬ್ಬ ಅದ್ಭುತ ಮ್ಯಾಜಿಕ್ ಕಲಾವಿದ ಎನ್ನುವುದು ವಿಶೇಷ. ಕೇವಲ ವಿದ್ಯಾರ್ಥಿ ದೆಸೆಯಲ್ಲಿ ಭಾಷಣಕಾರನಾಗಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಅವರು, ಇಂದು ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇವರ ತಂದೆ ರಾಜೇಂದ್ರನ್ ಮತ್ತು ತಾಯಿ ಲತಾ. ಪತ್ನಿ ಲಕ್ಷ್ಮೀ ಕೃಷ್ಣ ಅವರು ಮಂಗಳೂರಿನಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮದೇ ಜಿಲ್ಲೆಯ ಮಣ್ಣಿನ ಸೊಗಡನ್ನು ಬಲ್ಲ, ಇಲ್ಲಿನ ಸಮಸ್ಯೆಗಳಿಗೆ ಹತ್ತಿರವಿರುವ ನಿತಿನ್ ರಾಜ್ ಅವರ ನೇಮಕವು ಕಾಸರಗೋಡಿನ ಪೊಲೀಸ್ ವ್ಯವಸ್ಥೆಗೆ ಹೊಸ ಚೈತನ್ಯ ನೀಡಲಿದೆ ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿದೆ.