ಕಾಂಗ್ರೆಸ್‌ಗಾಗಿ ನಿಷ್ಠೆಯಿಂದ ದುಡಿದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಉತ್ತಮ ಅವಕಾಶ ಖಚಿತ: ಸಚಿವ ಯು.ಟಿ. ಖಾದರ್

ಮಂಗಳೂರು, ಜೂನ್ 13: ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಪ್ರತಿಯೊಬ್ಬ ನಿಷ್ಠಾವಂತ ಕಾರ್ಯಕರ್ತರಿಗೂ ಒಂದಲ್ಲಾ ಒಂದು ದಿನ ಉತ್ತಮ ಅವಕಾಶ ದೊರೆಯುವುದು ಖಚಿತವಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಶುಕ್ರವಾರ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರದ ಜನರ ಪ್ರೀತಿ ಮತ್ತು ಪಕ್ಷದ ನಾಯಕರ ಬೆಂಬಲದಿಂದ ಈ ಹಂತ ತಲುಪಲು ಸಾಧ್ಯವಾಗಿದೆ ಎಂದು ತಿಳಿಸಿದರು.

ತಾವು ಮಾಡಿದ ಸೇವೆಯನ್ನು ಪರಿಗಣಿಸಿ ಪಕ್ಷವು ಜವಾಬ್ದಾರಿ ನೀಡಿದ್ದು, ಪಕ್ಷದ ವಿಶ್ವಾಸಕ್ಕೆ ತಕ್ಕಂತೆ ತಮ್ಮ ಕರ್ತವ್ಯವನ್ನು ನಿರ್ವಹಿಸುವುದಾಗಿ ಖಾದರ್ ಹೇಳಿದರು. ನಾಯಕರ ವ್ಯಕ್ತಿತ್ವಕ್ಕೆ ಧಕ್ಕೆಯಾದರೆ ಅದು ಪಕ್ಷದ ಘನತೆಗೂ ಹಾನಿಯಾಗುತ್ತದೆ. ಹೀಗಾಗಿ ಪಕ್ಷದ ಗೌರವ ಮತ್ತು ನಾಯಕರ ಪ್ರತಿಷ್ಠೆಯನ್ನು ಕಾಪಾಡುವುದು ಪ್ರತಿಯೊಬ್ಬ ಕಾರ್ಯಕರ್ತರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಕಾರ್ಯಕರ್ತರು ಆತಂಕ ಪಡುವ ಅಗತ್ಯವಿಲ್ಲ. ಪಕ್ಷವು ಈ ಪ್ರಕ್ರಿಯೆಯನ್ನು ಸಮರ್ಥವಾಗಿ ಎದುರಿಸಲಿದ್ದು, ಎಲ್ಲರೂ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಇದೇ ವೇಳೆ, ಜೂನ್ 21ರಂದು ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವುದಾಗಿ ತಿಳಿಸಿದ ಖಾದರ್, ಅವರಿಗೆ ಈ ಸ್ಥಾನ ದೊರೆತಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಸಂದ ಗೌರವವಾಗಿದೆ ಎಂದು ಹೇಳಿದರು. ಆದ್ದರಿಂದ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾದ ಮಮತಾ ಗಟ್ಟಿ, ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್, ಲಾವಣ್ಯ ಬಳ್ಳಾಲ್, ಸದಾಶಿವ ಉಳ್ಳಾಲ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಭಾಸ್ಕರ್ ಕೆ., ಪಕ್ಷದ ಪ್ರಮುಖರಾದ ಶುಭೋದಯ ಆಳ್ವ ಅಪ್ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಬ್ದುಲ್ ರಝಾಕ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!