ಮಂಜೇಶ್ವರ: ಪಯ್ಯನ್ನೂರು ಎಡಾಟ್‌ನಲ್ಲಿ ಸ್ವರ್ಣೋದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ, ಲಕ್ಷಾಂತರ ರೂಪಾಯಿ ನಗದು ಮತ್ತು ಚಿನ್ನಾಭರಣವನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಪ್ರಮುಖ ಆರೋಪಿಯನ್ನು ಉಪ್ಪಳದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರು ಅಂಜಾಪೀಡಿಗ ನಿವಾಸಿ, ಬಿಜೆಪಿ ಪ್ರಾದೇಶಿಕ ನಾಯಕ ಸನು ಅಲಿಯಾಸ್ ಸಂತೋಷ್ ಬಂಧಿತ ಆರೋಪಿ. ಈತನ ಬಂಧನವು ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ಪಡೆದಿದೆ.
ಮೂಲತಃ ಮಹಾರಾಷ್ಟ್ರದವರಾಗಿದ್ದು, ತಲಕ್ಕೇರಿಯಲ್ಲಿ ಚಿನ್ನಾಭರಣ ಸಂಸ್ಥೆಯನ್ನು ನಡೆಸುತ್ತಿದ್ದ ಕುಟುಂಬವು ಜೂನ್ 2ರಂದು ಪ್ರಯಾಣಿಸುತ್ತಿದ್ದಾಗ, ಎಡಾಟ್‌ನಲ್ಲಿ ದುಷ್ಕರ್ಮಿಗಳು ಕಾರನ್ನು ಹಿಂಬಾಲಿಸಿ, ಅಡ್ಡಗಟ್ಟಿ ದರೋಡೆ ನಡೆಸಿದ್ದರು. ಈ ಕೃತ್ಯದ ವೇಳೆ 55 ಲಕ್ಷ ರೂಪಾಯಿ ನಗದು ಹಾಗೂ ಮೌಲ್ಯವಾನ ಚಿನ್ನಾಭರಣಗಳನ್ನು ದೋಚಲಾಗಿತ್ತು.
ಪ್ರಕರಣದ ತನಿಖೆಯನ್ನು ಪಯ್ಯನ್ನೂರು ಡಿವೈಎಸ್ಪಿ ನೇತೃತ್ವದಲ್ಲಿ ಚುರುಕುಗೊಳಿಸಲಾಗಿದ್ದು, ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ, ಈ ದರೋಡೆಕೋರರ ತಂಡವು ಬಾಡಿಗೆಗೆ ಪಡೆದಿದ್ದ ಮತ್ತೊಂದು ಕಾರನ್ನು ಕಣ್ಣೂರಿನ ಚೋಕ್ಲಿಯಿಂದ ಪತ್ತೆ ಹಚ್ಚಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಈ ದರೋಡೆಯ ಹಿಂದೆ ಸುಸಜ್ಜಿತ ಅಂತರಾಜ್ಯ ಸಂಪರ್ಕ ಜಾಲವೊಂದು ಕಾರ್ಯಾಚರಿಸುತ್ತಿರಬಹುದು ಎಂಬ ಸುಳಿವು ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ