ಕೋಲ್ಕತಾ,: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಬಳಿಕ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಭಿನ್ನಮತ ಮತ್ತಷ್ಟು ತೀವ್ರಗೊಂಡಿರುವ ಬೆನ್ನಲ್ಲೇ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಸಂಘಟನೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ.
ಪಕ್ಷದಲ್ಲಿ ತಮ್ಮ ಹಿಡಿತವನ್ನು ಬಲಪಡಿಸುವ ಉದ್ದೇಶದಿಂದ ವಾರದ ಹಿಂದೆ ಯುವ ಘಟಕದ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದ ಶಾಸಕಿ ಸಯೋನಿ ಘೋಷ್ ಅವರನ್ನು ಹುದ್ದೆಯಿಂದ ತೆರವುಗೊಳಿಸಿ, ಅವರ ಸ್ಥಾನಕ್ಕೆ ಯುವ ನಾಯಕ ಅರ್ನಾಬ್ ಬ್ಯಾನರ್ಜಿ ಅವರನ್ನು ನೇಮಿಸಲಾಗಿದೆ.
ಅದೇ ರೀತಿ, ತೃಣಮೂಲ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಕೋಲ್ಕತಾ ದಕ್ಷಿಣ ಕ್ಷೇತ್ರದ ಸಂಸದೆ ಮಾಲಾ ರಾಯ್ ಅವರನ್ನು ಪದಚ್ಯುತಗೊಳಿಸಿ, ಕಾಲಿಗಂಜ್ ಕ್ಷೇತ್ರದ ಶಾಸಕಿ ಆಲಿಫಾ ಮೊಹಮ್ಮದ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಈ ನಿರ್ಧಾರವನ್ನು ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಶನಿವಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಯೋನಿ ಘೋಷ್ ಮತ್ತು ಮಾಲಾ ರಾಯ್ ಅವರು ಪಕ್ಷದೊಳಗಿನ ಭಿನ್ನಮತೀಯರೊಂದಿಗೆ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಇದೀಗ ಟಿಎಂಸಿಯ ಲೋಕಸಭಾ ಸದಸ್ಯರಲ್ಲಿಯೂ ಭಿನ್ನಮತ ತೀವ್ರಗೊಂಡಿದ್ದು, ಬಂಡಾಯ ಗುಂಪಿನ ಸಂಸದರು ಸೋಮವಾರ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿರಿಯ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರು ಸಹ ಬಂಡಾಯ ಗುಂಪಿನೊಂದಿಗೆ ಕೈಜೋಡಿಸಿರುವುದರಿಂದ ಭಿನ್ನಮತೀಯ ಸಂಸದರ ಸಂಖ್ಯೆ 19ರಿಂದ 20ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. ಟಿಎಂಸಿಯ 28 ಲೋಕಸಭಾ ಸದಸ್ಯರ ಪೈಕಿ 20 ಮಂದಿ ತಮ್ಮದೇ ನಿಜವಾದ ಬಣ ಎಂದು ಘೋಷಿಸುವ ಪತ್ರಕ್ಕೆ ಸಹಿ ಹಾಕಿದ್ದು, ಅದನ್ನು ಸೋಮವಾರ ಸ್ಪೀಕರ್ಗೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಬಂಡಾಯ ಗುಂಪಿಗೆ ಲೋಕಸಭಾಧ್ಯಕ್ಷರಿಂದ ಮಾನ್ಯತೆ ದೊರೆತ ಬಳಿಕ ಬಿಜೆಪಿ ಬೆಂಬಲಿತ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್ಡಿಎ) ಬೆಂಬಲ ನೀಡಲಾಗುವುದು ಎಂದು ಭಿನ್ನಮತೀಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪಕ್ಷದಲ್ಲಿ ಭಿನ್ನಮತ ಬಹಿರಂಗಗೊಂಡ ಬಳಿಕ ಜೂನ್ 5ರಂದು ರಾಜ್ಯಾದ್ಯಂತ ಪಕ್ಷದ ವಿವಿಧ ಸಮಿತಿಗಳು ಹಾಗೂ ಸಂಘಟನೆಗಳನ್ನು ವಿಸರ್ಜಿಸಿದ್ದ ಮಮತಾ ಬ್ಯಾನರ್ಜಿ, ತಮ್ಮ ಆಪ್ತರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದ್ದರು. ಆದರೆ ಆ ಪಟ್ಟಿಯಲ್ಲಿದ್ದ ಸಯೋನಿ ಘೋಷ್ ಮತ್ತು ಮಾಲಾ ರಾಯ್ ಕೂಡ ಬಳಿಕ ಭಿನ್ನಮತೀಯರೊಂದಿಗೆ ಗುರುತಿಸಿಕೊಂಡಿರುವುದು ಪಕ್ಷದ ನಾಯಕತ್ವಕ್ಕೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.