ಮಂಗಳೂರು:ಬಜ್ಪೆ ಬಂಟರ ಸಂಘ (ರಿ) ವಲಯದ ಮಹತ್ವಾಕಾಂಕ್ಷೆಯ ಕನಸಿನ ಕೂಸಾಗಿರುವ ನೂತನ ಬಂಟರ ಭವನ ನಿರ್ಮಾಣ ಯೋಜನೆಗೆ ಜುಲೈ 5ರಂದು ಬೆಳಿಗ್ಗೆ 10.30 ಗಂಟೆಗೆ ತಾರಿಕಂಬಳ – ಮುಂಡಾರಿನಲ್ಲಿ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಬಂಟರ ಸಂಘ (ರಿ) ಬಜ್ಪೆ ವಲಯದ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜ್ಪೆ ಬಂಟರ ಸಂಘ ವಲಯವು 16 ಗ್ರಾಮಗಳನ್ನು ಒಳಗೊಂಡಿದ್ದು, ಕಳೆದ 14 ವರ್ಷಗಳಿಂದ ಸಂಸ್ಥಾಪಕ ಅಧ್ಯಕ್ಷ ವಿಜಯನಾಥ್ ವಿಠ್ಠಲ್ ಶೆಟ್ಟಿ ಹಾಗೂ ನಿಕಟಪೂರ್ವ ಅಧ್ಯಕ್ಷ ಬಾಬು ಶೆಟ್ಟಿ ಪೆರಾರ ಅವರ ನೇತೃತ್ವದಲ್ಲಿ ವಿವಿಧ ಸಮಾಜಮುಖಿ ಮತ್ತು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಬಂದಿದೆ. ಹಲವು ವರ್ಷಗಳಿಂದ ಕನಸಾಗಿದ್ದ ಸಂಘದ ಸ್ವಂತ ಭವನ ನಿರ್ಮಾಣ ಯೋಜನೆಗೆ ಅಂದಾಜು 10 ಕೋಟಿ ವೆಚ್ಚ ತಗುಲಲಿದ್ದು , ಅದರ ಶಿಲಾನ್ಯಾಸ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂಆರ್ಜಿ ಗ್ರೂಪ್ನ ಸ್ಥಾಪಕ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಶಿಲಾನ್ಯಾಸ ನೆರವೇರಿಸಲಿದ್ದು, ಶಬರಿ ಇಂಡಸ್ಟ್ರಿ ಕ್ಯಾಟರಿಂಗ್ ಸರ್ವಿಸಸ್ನ ವ್ಯವಸ್ಥಾಪಕ ನಿರ್ದೇಶಕ ಕೆ.ಕೆ. ಶೆಟ್ಟಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬಂಟರ ಯಾನೆ ನಾಡವರ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ವಿಕೆ ಗ್ರೂಪ್ ಆಫ್ ಕಂಪನೀಸ್ನ ಸಿಎಂಡಿ ಕರುಣಾಕರ್ ಶೆಟ್ಟಿ ಮಧ್ಯಗುತ್ತು ಅವರು ಭವನದ ನೀಲನಕ್ಷೆ ಬಿಡುಗಡೆ ಮಾಡಲಿದ್ದು, ಪೂನಾ ಬಂಟರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ ಕೆಂಜಾರುಗುತ್ತು ಪ್ರತಿಭಾ ಪುರಸ್ಕಾರ ವಿತರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಬಂಟ ಸಮುದಾಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ ಮೂವರು ದಾನಿಗಳನ್ನು ಸನ್ಮಾನಿಸಲಾಗುವುದು. ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್, ಮುಂಬೈ ಇದರ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಕನ್ಯಾನ ಸದಾಶಿವ ಶೆಟ್ಟಿ, ಭವಾನಿ ಶಿಪ್ಪಿಂಗ್ ಸರ್ವಿಸಸ್ನ ಸ್ಥಾಪಕ ಅಧ್ಯಕ್ಷ ಕುಸುಮಾಧರ ಡಿ. ಶೆಟ್ಟಿ ಹಾಗೂ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಬರೋಡಾ ಇದರ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಶೆಟ್ಟಿ ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಂಗಳೂರು ಉತ್ತರ ಶಾಸಕ ಡಾ. ಭರತ್ ವೈ. ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಶಿಲಾನ್ಯಾಸ ಕಾರ್ಯಕ್ರಮದೊಂದಿಗೆ ಶೈಕ್ಷಣಿಕ ಧನಸಹಾಯ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ನಡೆಯಲಿದ್ದು, ಬಜ್ಪೆ ಬಂಟರ ಸಂಘ ವಲಯದ 16 ಗ್ರಾಮಗಳಿಂದ ಸುಮಾರು 3,000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಸಂಘದ ಎಲ್ಲಾ ಸದಸ್ಯರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಸಹಕಾರದಿಂದ ಈ ಮಹತ್ವದ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಸುಕೇಶ್ ಶೆಟ್ಟಿ, ಕುಸುಮಾಧರ ಶೆಟ್ಟಿ, ಡಾ. ಪ್ರಸಾದ್ ರೈ, ಅಜಿತ್ ಕುಮಾರ್ ಶೆಟ್ಟಿ, ಪ್ರೀತಿ ಹರೀಶ್ ಶೆಟ್ಟಿ ಹಾಗೂ ದೀಪ್ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.