ಉಡುಪಿ ಜಿಲ್ಲಾಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಶಿರ್ವ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶವನ್ನು ಹಂಚಿಕೊಂಡ ಅವರು , ಉಡುಪಿ ಜಿಲ್ಲೆಯ ಐದು ತಾಲೂಕುಗಳ ಜನತೆಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸಬೇಕಾದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಆರಂಭವಾಗಿ ಹಲವು ವರ್ಷಗಳಾದರೂ ಇನ್ನೂ ಪೂರ್ಣಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ಜನರು ಉತ್ತಮ ವೈದ್ಯಕೀಯ ಸೇವೆಗಾಗಿ ಇಂದಿಗೂ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಹಾಗೂ ವಿಶೇಷ ಚಿಕಿತ್ಸೆಗಳಿಗಾಗಿ ಮಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಗೆ ತೆರಳಬೇಕಾಗುತ್ತಿರುವುದು ಸಾರ್ವಜನಿಕರಿಗೆ ಆರ್ಥಿಕ ಮತ್ತು ಮಾನಸಿಕ ಹೊರೆ ಉಂಟುಮಾಡುತ್ತಿದೆ ಎಂದು ಅವರು ಹೇಳಿದರು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹಳೆಯ ಜಿಲ್ಲಾಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಂಡುಬರುತ್ತಿದ್ದು, ರೋಗಿಗಳಿಗೆ ಅಗತ್ಯ ಮಟ್ಟದ ಆರೋಗ್ಯ ಸೇವೆ ಒದಗಿಸಲು ಹಲವು ಸವಾಲುಗಳಿವೆ. ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಿಸಿದರೆ ಜಿಲ್ಲೆಯ ಜನತೆಗೆ ಗುಣಮಟ್ಟದ ಹಾಗೂ ಸುಸಜ್ಜಿತ ಆರೋಗ್ಯ ಸೇವೆ ದೊರೆಯಲಿದೆ ಎಂದು ಅಭಿಪ್ರಾಯಪಟ್ಟರು.
ಉಡುಪಿ ಜಿಲ್ಲೆಯ ಜನರ ಬಹುಕಾಲದ ನಿರೀಕ್ಷೆಯಾಗಿರುವ ಜಿಲ್ಲಾಸ್ಪತ್ರೆಯ ನೂತನ ಕಟ್ಟಡವನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸಮರ್ಪಿಸಬೇಕು. ವಿಶೇಷವಾಗಿ ಬಡ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ಒದಗಿಸಲು ಸರ್ಕಾರ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ಕುರಿತು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ವೈಯಕ್ತಿಕವಾಗಿ ಗಮನಹರಿಸಿ ಕಾಮಗಾರಿಯನ್ನು ತ್ವರಿತಗೊಳಿಸುವ ಮೂಲಕ ಜಿಲ್ಲೆಯ ಜನರ ಆರೋಗ್ಯ ಸೇವೆಯ ಕನಸನ್ನು ನನಸಾಗಿಸಬೇಕು ಎಂದು ಪವನ್ ಕುಮಾರ್ ಶಿರ್ವ ಮನವಿ ಮಾಡಿದ್ದಾರೆ.