SIR ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಿ: ಮಹಿಳಾ ಕಾಂಗ್ರೇಸ್ ಅದ್ಯಕ್ಷೆ ಉಷಾ ಅಂಚನ್,ಆಟಿಡೊಂಜಿ ಕೂಟ, ಕ್ರೀಡಾಕೂಟಗಳ ಮೂಲಕ ಮಹಿಳೆಯರನ್ನು ಸಂಘಟಿಸಿ ಬ್ಲಾಕ್ ಅದ್ಯಕ್ಷೆ ಐಡಾ ಸುರೇಶ್
ಪಾಣೆಮಂಗಳೂರು: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳ ಮಾಸಿಕ ಸಭೆಯು ಇಂದು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಐಡಾ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಉಷಾ ಅಂಚನ್ ಮಾತನಾಡಿ, ಮತದಾರರ ಪಟ್ಟಿಯ ವಿಶೇಷ ತಿದ್ದುಪಡಿ (SIR) ಪ್ರಕ್ರಿಯೆ ಕುರಿತು ಮಹಿಳೆಯರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಮತದಾರರ ಪಟ್ಟಿಯಿಂದ ಯಾವುದೇ ಅರ್ಹ ಮಹಿಳೆಯ ಹೆಸರು ಕೈ ತಪ್ಪದಂತೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡಬೇಕು. ಇದು ಕೇವಲ ರಾಜಕೀಯ ಕಾರ್ಯವಲ್ಲ, ಪ್ರಜಾಪ್ರಭುತ್ವದ ಜವಾಬ್ದಾರಿಯೂ ಹೌದು ಎಂದು ಅವರು ತಿಳಿಸಿದರು.
ಮಹಿಳಾ ಬೂತ್ ಮಟ್ಟದ ಅಧಿಕಾರಿಗಳು (BLO) ಕಾರ್ಯನಿರ್ವಹಿಸುತ್ತಿರುವ ಪ್ರದೇಶಗಳಲ್ಲಿ ಸ್ಥಳೀಯ ಮಹಿಳಾ ಕಾರ್ಯಕರ್ತೆಯರು ಅವರೊಂದಿಗೆ ಸಮನ್ವಯ ಸಾಧಿಸಿ ಮತದಾರರ ನೋಂದಣಿ, ತಿದ್ದುಪಡಿ ಹಾಗೂ ಸೇರ್ಪಡೆ ಪ್ರಕ್ರಿಯೆಗಳ ಕುರಿತು ಮಾಹಿತಿ ಸಂಗ್ರಹಿಸಿ, ಅದರ ವರದಿಯನ್ನು ಬ್ಲಾಕ್ ಮಟ್ಟಕ್ಕೆ ತಲುಪಿಸಬೇಕು. ಮುಂದಿನ ದಿನಗಳಲ್ಲಿ ಚುನಾವಣೆಗಳ ಸರಮಾಲೆಯೇ ಎದುರಾಗಲಿದ್ದು, ಈಗಿನಿಂದಲೇ ಮಹಿಳೆಯರನ್ನು ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವ ಮೂಲಕ ಬಲಿಷ್ಠ ಸಂಘಟನೆ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಉಷಾ ಅಂಚನ್ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಐಡಾ ಸುರೇಶ್, ಗ್ರಾಮ ಮಟ್ಟದಲ್ಲಿ ಮಹಿಳೆಯರನ್ನು ಒಗ್ಗೂಡಿಸುವ ಉದ್ದೇಶದಿಂದ ಆಟಿಡೊಂಜಿ ಕೂಟ, ಒಳಾಂಗಣ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ-ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ. ಇಂತಹ ಚಟುವಟಿಕೆಗಳು ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಸುವುದರ ಜೊತೆಗೆ ಸಂಘಟನೆಯ ಬಲವರ್ಧನೆಗೂ ಸಹಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಮುಂಬರುವ ಸಂಘಟನಾ ಕಾರ್ಯಕ್ರಮಗಳು, ಸದಸ್ಯತ್ವ ಅಭಿಯಾನ ಹಾಗೂ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಿತು. ಮಹಿಳಾ ಕಾಂಗ್ರೆಸ್ ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳು ತಮ್ಮ ಸಲಹೆ-ಸೂಚನೆಗಳನ್ನು ನೀಡಿದರು.
ಐಡಾ ಸುರೇಶ್ ಸ್ವಾಗತಿಸಿದರು. ಜೋಸ್ಪಿನ್ ವಂದಿಸಿದರು. ವೇದಿಕೆಯಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಚಂದ್ರಶೇಖರ ಭಂಡಾರಿ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಎ. ಅಸ್ಮಾ, ಹಸೈನಾರ್ ತಾಳಿತ್ತನೂಜಿ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.