ಮಂಜೇಶ್ವರ: ಹೊಸಂಗಡಿಯ ಲಾಡ್ಜ್ವೊಂದರಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸಂಗ್ರಹಣೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಚ್ಚಂಪಾಡಿ ನಿವಾಸಿ ಅಹಮ್ಮದ್ ಸೈಫುದ್ದೀನ್ (21) ಮತ್ತು ಹೊಸಬೆಟ್ಟು ನಿವಾಸಿ ಮುಹಮ್ಮದ್ ಮುಸ್ತಾಕ್ (36) ಬಂಧಿತ ಆರೋಪಿಗಳು.
ಪೊಲೀಸರು ಲಾಡ್ಜ್ ಕೊಠಡಿಯನ್ನು ಶೋಧಿಸಿದಾಗ, ಹಾಸಿಗೆಯ ತಲೆದಿಂಬಿನ ಅಡಿಯಲ್ಲಿ ಬಚ್ಚಿಟ್ಟಿದ್ದ 1.61 ಗ್ರಾಂ ಎಂಡಿಎಂಎ ಹಾಗೂ 38.33 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಅಹಮ್ಮದ್ ಸೈಫುದ್ದೀನ್ ಈ ಹಿಂದೆಯೇ ಎರಡು ಮಾದಕ ದ್ರವ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇದೀಗ ಮತ್ತೊಮ್ಮೆ ಕೃತ್ಯ ಎಸಗುತ್ತಾ ಸಿಕ್ಕಿಬಿದ್ದಿದ್ದಾನೆ. ಎಸ್ಐ ಉಮೇಶ್ ಕೆ.ಆರ್. ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪ್ರಕರಣ ದಾಖಲಾಗಿದೆ.