ಮಂಗಳೂರಿನ ಟ್ರಾಫಿಕ್‌ಗೆ ನಿಸ್ವಾರ್ಥ ಸೇವೆ: ಎಂಟೂವರೆ ವರ್ಷಗಳಿಂದ ಜನರ ಸಮಯ ಉಳಿಸುತ್ತಿರುವ ಅಬ್ದುಲ್ ರಹಮಾನ್

ಮಂಗಳೂರು, ಜೂನ್ 19: ನಗರದ ವಿವಿಧ ಭಾಗಗಳಲ್ಲಿ ಕಳೆದ ಎಂಟೂವರೆ ವರ್ಷಗಳಿಂದ ಸ್ವಯಂಪ್ರೇರಿತವಾಗಿ ಟ್ರಾಫಿಕ್ ನಿಯಂತ್ರಣ ಕಾರ್ಯ ನಿರ್ವಹಿಸುತ್ತಿರುವ ಬಜಾಲ್ ಪಕ್ಕಲಡ್ಕ ನಿವಾಸಿ ಅಬ್ದುಲ್ ರಹಮಾನ್ ಅವರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹಿಂದೆ ಲಾರಿ ಹಾಗೂ ಕಾರು ಚಾಲಕರಾಗಿ ಕಾರ್ಯನಿರ್ವಹಿಸಿದ್ದ ರಹಮಾನ್, ರಸ್ತೆಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆಯಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಅನುಭವಿಸುವ ತೊಂದರೆಗಳನ್ನು ನೇರವಾಗಿ ಕಂಡಿದ್ದರು. ಈ ಅನುಭವವೇ ಅವರನ್ನು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಟ್ರಾಫಿಕ್ ಕ್ಲಿಯರೆನ್ಸ್ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿತು.

“ಜನರ ಸಮಯ ಉಳಿಸುವುದು ಹಾಗೂ ಸಂಚಾರವನ್ನು ಸುಗಮಗೊಳಿಸುವುದೇ ನನ್ನ ಉದ್ದೇಶ. ಸಮಾಜಕ್ಕೆ ನನ್ನಿಂದಾಗುವ ಸಣ್ಣ ಸೇವೆಯಿದು” ಎಂದು ಅಬ್ದುಲ್ ರಹಮಾನ್ ತಿಳಿಸಿದ್ದಾರೆ.

ನಗರದ ವಿವಿಧ ಜಂಕ್ಷನ್‌ಗಳು ಹಾಗೂ ಸಂಚಾರ ದಟ್ಟಣೆ ಹೆಚ್ಚಾಗುವ ಪ್ರದೇಶಗಳಲ್ಲಿ ವಾಹನಗಳ ಸಂಚಾರ ಸುಗಮಗೊಳಿಸುವ ಮೂಲಕ ಅವರು ಸಾವಿರಾರು ವಾಹನ ಸವಾರರಿಗೆ ನೆರವಾಗುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯಿಂದ ಸಾರ್ವಜನಿಕರು ಮತ್ತು ಸ್ಥಳೀಯ ನಿವಾಸಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಾಮಾಜಿಕ ಸೇವೆಯ ಜೊತೆಗೆ ಅಬ್ದುಲ್ ರಹಮಾನ್ ಅವರು ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದು, ಯುವಕರಿಗೆ ಪ್ರೇರಣೆಯಾಗಿದ್ದಾರೆ.

ಸಮಾಜಮುಖಿ ಚಿಂತನೆ, ಸೇವಾ ಮನೋಭಾವ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಅಬ್ದುಲ್ ರಹಮಾನ್ ಅವರು ಇತರರಿಗೂ ಮಾದರಿಯಾಗಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!