ತುಂಬೆ ಮೆಡಿಸಿಟಿಗೆ ಯುಎಇ ವಿದೇಶಿ ವ್ಯಾಪಾರ ಸಚಿವರ ಭೇಟಿ

ಅಜ್ಮಾನ್ (ಯುಎಇ): ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿದೇಶಿ ವ್ಯಾಪಾರ ಸಚಿವ ಡಾ. ಥಾನಿ ಬಿನ್ ಅಹ್ಮದ್ ಅಲ್ ಜೆಯೌದಿ ಅವರು ಅಜ್ಮಾನ್‌ನಲ್ಲಿರುವ ತುಂಬೆ ಮೆಡಿಸಿಟಿ ಕ್ಯಾಂಪಸ್‌ಗೆ ಭೇಟಿ ನೀಡಿ ವೈದ್ಯಕೀಯ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಂಶೋಧನಾ ಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು.

ಸಚಿವರನ್ನು ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದೀನ್, ಆರೋಗ್ಯ ವಿಭಾಗದ ಉಪಾಧ್ಯಕ್ಷ ಅಖ್ತರ್ ಮೊಯಿದೀನ್ ತುಂಬೆ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.

ಭೇಟಿಯ ಸಂದರ್ಭದಲ್ಲಿ ಸಚಿವರು ಗಲ್ಫ್ ಮೆಡಿಕಲ್ ಯೂನಿವರ್ಸಿಟಿ, ತುಂಬೆ ಯುನಿವರ್ಸಿಟಿ ಆಸ್ಪತ್ರೆ ಸೇರಿದಂತೆ ವಿವಿಧ ವೈದ್ಯಕೀಯ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ವೀಕ್ಷಿಸಿದರು. 1998ರಲ್ಲಿ ಆರಂಭವಾದ ಈ ಸಂಸ್ಥೆ ಇಂದು 111ಕ್ಕೂ ಅಧಿಕ ದೇಶಗಳ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿರುವ ಜಾಗತಿಕ ವೈದ್ಯಕೀಯ ಶಿಕ್ಷಣ ಕೇಂದ್ರವಾಗಿ ಬೆಳೆದಿರುವುದನ್ನು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ತುಂಬೆ ಯುನಿವರ್ಸಿಟಿ ಆಸ್ಪತ್ರೆಯ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಾ. ತುಂಬೆ ಮೊಯಿದೀನ್ ಹಾಗೂ ಡಾ. ಥಾನಿ ಬಿನ್ ಅಹ್ಮದ್ ಅಲ್ ಜೆಯೌದಿ ಅವರು ಯುಎಇಯ ಜ್ಞಾನ ಆಧಾರಿತ ಆರ್ಥಿಕತೆ, ವೈದ್ಯಕೀಯ ಸಂಶೋಧನೆ, ಜೀವ ವಿಜ್ಞಾನ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಜಾಗತಿಕ ಹೂಡಿಕೆ ಮತ್ತು ಪ್ರತಿಭೆಗಳನ್ನು ಆಕರ್ಷಿಸುವಲ್ಲಿ ಖಾಸಗಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರದ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ತುಂಬೆ ಮೊಯಿದೀನ್, “1998ರಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯನ್ನು ಆರಂಭಿಸಿದಾಗ ಯುಎಇಗೆ ದೀರ್ಘಕಾಲ ಸೇವೆ ಸಲ್ಲಿಸುವ ಸಂಸ್ಥೆಯನ್ನು ನಿರ್ಮಿಸುವ ಗುರಿ ಹೊಂದಿದ್ದೆವು. ಆರೋಗ್ಯ ವೃತ್ತಿಪರರ ಶಿಕ್ಷಣ ಮತ್ತು ವೈದ್ಯಕೀಯ ಸಂಶೋಧನೆ ರಾಷ್ಟ್ರದ ಆರ್ಥಿಕ ಬೆಳವಣಿಗೆಯ ಪ್ರಮುಖ ಭಾಗವಾಗಿರುವುದನ್ನು ಈ ಭೇಟಿ ಮತ್ತೊಮ್ಮೆ ದೃಢಪಡಿಸಿದೆ” ಎಂದು ಹೇಳಿದರು.

ಸಚಿವ ಡಾ. ಥಾನಿ ಬಿನ್ ಅಹ್ಮದ್ ಅಲ್ ಜೆಯೌದಿ ಮಾತನಾಡಿ, “ವಿಶ್ವಮಟ್ಟದ ಆರೋಗ್ಯ ಸೇವೆ, ವೈದ್ಯಕೀಯ ಶಿಕ್ಷಣ ಮತ್ತು ಕ್ಲಿನಿಕಲ್ ಸಂಶೋಧನೆಯಲ್ಲಿ ತುಂಬೆ ಗ್ರೂಪ್ ಮಹತ್ವದ ಕೊಡುಗೆ ನೀಡುತ್ತಿದೆ. ‘ವಿ ದ ಯುಎಇ 2031’ ಗುರಿಗಳಿಗೆ ಅನುಗುಣವಾಗಿ ಆರೋಗ್ಯ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸುವಲ್ಲಿ ತುಂಬೆ ಮೆಡಿಸಿಟಿಯ ಪಾತ್ರ ಶ್ಲಾಘನೀಯವಾಗಿದೆ” ಎಂದು ಅಭಿಪ್ರಾಯಪಟ್ಟರು.

1997ರಲ್ಲಿ ಸ್ಥಾಪನೆಯಾದ ತುಂಬೆ ಗ್ರೂಪ್ ಶಿಕ್ಷಣ, ಆರೋಗ್ಯ ಸೇವೆ, ವೈದ್ಯಕೀಯ ಸಂಶೋಧನೆ, ಡಯಾಗ್ನೋಸ್ಟಿಕ್ಸ್, ಔಷಧ ಮಳಿಗೆಗಳು, ಆತಿಥ್ಯ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಜ್ಮಾನ್‌ನ ಅಲ್ ಜುರ್ಫ್ ಪ್ರದೇಶದಲ್ಲಿರುವ ತುಂಬೆ ಮೆಡಿಸಿಟಿ ಸಂಸ್ಥೆಯ ಪ್ರಮುಖ ಆರೋಗ್ಯ ಹಾಗೂ ಶಿಕ್ಷಣ ಕೇಂದ್ರವಾಗಿ ಗುರುತಿಸಿಕೊಂಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!