ಹರಿತ ಕರ್ಮ ಸೇನಾ ಕಾರ್ಯಕರ್ತರು ಮನೆ ಮನೆಗಳಿಂದ ಹಣ ಪಡೆದು ಸಂಗ್ರಹಿಸುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ದಾರಿ ಮಧ್ಯೆಯೇ ಉಪೇಕ್ಷಿಸುತ್ತಿರುವುದಾಗಿ ಆರೋಪ: ಆತಂಕದಲ್ಲಿ ಸಾರ್ವಜನಿಕರು

​ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ‘ಹರಿತ ಕರ್ಮ ಸೇನೆ’ಯ ಹೆಸರಿನಲ್ಲಿ ಮನೆಗಳಿಂದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸುವವರು, ಸಾರ್ವಜನಿಕರ ಹಿತದೃಷ್ಟಿಯನ್ನು ಮರೆತು ದಾರಿ ಮಧ್ಯೆಯೇ ತ್ಯಾಜ್ಯಗಳನ್ನು ಎಸೆದು ಹೋಗುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಇದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಹರಿತ ಕರ್ಮ ಸೇನೆಯವರು ಪ್ರತಿ ಮನೆಗಳಿಂದ 50 ರೂಪಾಯಿ ಶುಲ್ಕ ಪಡೆದು ತ್ಯಾಜ್ಯವನ್ನು ಸಂಗ್ರಹಿಸುತ್ತಾರೆ. ಆದರೆ, ನಿಗದಿತ ಸ್ಥಳಕ್ಕೆ ತ್ಯಾಜ್ಯವನ್ನು ಸಾಗಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು, ದಾರಿ ಮಧ್ಯೆಯೇ ಅದನ್ನು ಬಿಸಾಡಿ ಹೋಗುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಇದೀಗ ಮಳೆಗಾಲ ಆರಂಭವಾಗಿರುವ ಕಾರಣ, ದಾರಿ ಬದಿಯಲ್ಲಿ ಎಸೆದ ತ್ಯಾಜ್ಯಗಳು ಮಳೆನೀರಿಗೆ ಕೊಚ್ಚಿ ಹೋಗುತ್ತಿದ್ದು, ಅಸಹ್ಯಕರ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ, ರಾಶಿಯಾಗಿ ಬಿದ್ದಿರುವ ತ್ಯಾಜ್ಯಗಳನ್ನು ಬೀದಿ ನಾಯಿಗಳು ಎಳೆದಾಡುತ್ತಿದ್ದು, ದಾರಿಯುದ್ದಕ್ಕೂ ಹರಡುತ್ತಿವೆ. ಇದರಿಂದಾಗಿ ತ್ಯಾಜ್ಯದ ಮಧ್ಯೆ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಶಾಲಾ-ಮದ್ರಸಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ನಡೆದಾಡುವ ಸಾರ್ವಜನಿಕರಿಗೆ ಭಾರೀ ತೊಂದರೆಯಾಗುತ್ತಿದೆ. ದಾರಿ ಮಧ್ಯೆ ನಾಯಿಗಳು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳೂ ವರದಿಯಾಗುತ್ತಿದ್ದು, ಪೋಷಕರು ಆತಂಕಗೊಂಡಿದ್ದಾರೆ.


ಪ್ರಸ್ತುತ ಮಂಜೇಶ್ವರ ಗ್ರಾಮ ಪಂಚಾಯತ್‌ನ 9ನೇ ವಾರ್ಡ್‌ನಲ್ಲಿ ಈ ಸಮಸ್ಯೆ ತಾರಕಕ್ಕೇರಿದೆ. ರಸ್ತೆ ಬದಿಗಳಲ್ಲಿ ಉಪೇಕ್ಷಿಸಲಾಗಿರುವ ತ್ಯಾಜ್ಯಗಳಿಂದಾಗಿ ದುರ್ವಾಸನೆ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳ ಹರಡುವ ಭೀತಿಯೂ ಎದುರಾಗಿದೆ.

ಹಣ ಪಾವತಿಸಿದರೂ ತಮ್ಮ ಮನೆ ಬಾಗಿಲಿಗೆ ಬಂದ ತ್ಯಾಜ್ಯ ಹೀಗೆ ಅನಾಥವಾಗುತ್ತಿರುವುದು ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಹಲವು ಬಾರಿ ಹರಿತ ಕರ್ಮ ಸೇನಾ ಕಾರ್ಯಕರ್ತರ ಗಮನಕ್ಕೆ ತಂದರೂ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೆಂಬ ಆರೋಪ ವ್ಯಾಪಕವಾಗಿದೆ.

​ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಮಧ್ಯಪ್ರವೇಶಿಸಿ, ದಾರಿ ಮಧ್ಯೆ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!