ವಿಟ್ಲವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಜೂ.23ರಂದು ಸಾಂಕೇತಿಕ ವೇಗ ಜಾಥಾ

ವಿಟ್ಲ, ಜೂನ್ 20: ವಿಟ್ಲವನ್ನು ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಒತ್ತಾಯಿಸಿ ಜೂನ್ 23ರಂದು ವಿಟ್ಲ ಜೈನ ಬಸಡಿಯಿಂದ ನಾಡಕಚೇರಿವರೆಗೆ ಸಾಂಕೇತಿಕ ವೇಗ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಟ್ಲ ತಾಲೂಕು ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಸಮಿತಿಯ ಕಾರ್ಯದರ್ಶಿ ಕಾನಾ ಈಶ್ವರ ಭಟ್ ತಿಳಿಸಿದ್ದಾರೆ.

ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಟ್ಲ ತಾಲೂಕು ರಚನೆಗಾಗಿ ಪಕ್ಷಾತೀತವಾಗಿ ಹೋರಾಟ ನಡೆಸಲಾಗುತ್ತಿದ್ದು, ಸಮಾಜದ ಎಲ್ಲ ವರ್ಗಗಳ ಜನರು ಈ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ವಿಷಯದ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸಹ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ತಾಲೂಕಾಗಿರುವ ಬಂಟ್ವಾಳ ತಾಲೂಕಿನಲ್ಲಿ 75 ಗ್ರಾಮಗಳಿದ್ದು, ಕರೋಪಾಡಿ, ಕನ್ಯಾನ, ಪೆರುವಾಯಿ, ಮಾಣಿಲ, ಕೇಪು, ಪುಣಚ, ಬಿಳಿಯೂರು, ಕುಳ, ವಿಟ್ಲ ಮುಡ್ನೂರು, ಕೊಳ್ನಾಡು ಹಾಗೂ ಸಾಲೆತ್ತೂರು ಗ್ರಾಮಗಳ ಜನರು ವಿವಿಧ ಸರ್ಕಾರಿ ಸೇವೆಗಳಿಗಾಗಿ 25ರಿಂದ 50 ಕಿಲೋಮೀಟರ್ ದೂರದ ಬಂಟ್ವಾಳ ತಾಲೂಕು ಕಚೇರಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಗಡಿನಾಡ ಭಾಗದ ಜನರಿಗೆ ಆಡಳಿತಾತ್ಮಕ ಸೌಲಭ್ಯಗಳನ್ನು ಸಮೀಪದಲ್ಲೇ ಒದಗಿಸಲು ಹಾಗೂ ಸಮಗ್ರ ಅಭಿವೃದ್ಧಿಗೆ ವೇಗ ನೀಡಲು ವಿಟ್ಲ ತಾಲೂಕು ರಚನೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ರಮಾನಾಥ ವಿಟ್ಲ ಮಾತನಾಡಿ, ಹಿಂದೆ ವಿಟ್ಲ ವಿಧಾನಸಭಾ ಕ್ಷೇತ್ರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದವು. ವಿಟ್ಲ ತಾಲೂಕು ಹಾಗೂ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಯಿಂದ ಈ ಭಾಗದ ಅಭಿವೃದ್ಧಿಗೆ ಹೊಸ ಅವಕಾಶಗಳು ದೊರೆಯಲಿವೆ ಎಂದು ಹೇಳಿದರು.

ಈ ಹಿಂದೆ ತಾಲೂಕು ರಚನೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲಾಗಿದ್ದರೂ, ಕೆಲವು ಗ್ರಾಮಗಳ ವಿರೋಧದಿಂದ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು. ಇದೀಗ ಮತ್ತೊಮ್ಮೆ ಜನಬೆಂಬಲದೊಂದಿಗೆ ಹೋರಾಟವನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಬಿ.ಕೆ. ಬಶೀರ್, ಉಪಾಧ್ಯಕ್ಷ ಹಸೈನಾರ್ ಹಾಗೂ ಸಂಚಾಲಕ ರಾಮಣ್ಣ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!