ಸರಕಾರಿ ಪ್ರೌಢ ಶಾಲೆ, ಮಂಚಿ – ಕೊಳ್ನಾಡು ಮತ್ತು ಹಿರಿಯ ವಿದ್ಯಾರ್ಥಿ ಸಂಘ (ರಿ.) ಮಂಚಿ ಕೊಳ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವಿಟ್ಲ ಘಟಕದ ಸಹಯೋಗದೊಂದಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ಮಂಚಿ ಕೊಳ್ನಾಡು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ನಾಟ್ಯ ತರಗತಿಯ ಯಕ್ಷಧ್ರುವ ಯಕ್ಷ ಶಿಕ್ಷಣ – 2026 ಕಾರ್ಯಕ್ರಮವು ದಿನಾಂಕ: 19.06.2026 ರ ಶುಕ್ರವಾರ ಶಾಲಾ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ದೀಪ ಬೆಳಗಿ ಉದ್ಘಾಟಿಸಿದ ಶಾಲಾ ಹಿರಿಯ ವಿದ್ಯಾರ್ಥಿ, ಯಕ್ಷಗಾನ ಕಲಾವಿದೆ ಹಾಗೂ ಶಿಕ್ಷಕಿಯಾಗಿರುವ ಶ್ರೀಮತಿ ಶಾಲಿನಿ ಶೆಟ್ಟಿ ಮಾತನಾಡಿ, “ಪಟ್ಲ ಫೌಂಡೇಶನ್ ವತಿಯಿಂದ ನಡೆಸಲಾಗುವ ಉಚಿತ ಯಕ್ಷ ಶಿಕ್ಷಣ ಯೋಜನೆಯು ಮಕ್ಕಳ ಪ್ರತಿಭೆ ಮತ್ತು ಬೌದ್ಧಿಕ ವಿಕಾಸಕ್ಕೆ ಮಾತ್ರವಲ್ಲದೆ ಸಂಸ್ಕಾರದ ಗುಣವನ್ನು ಬೆಳೆಸುವಲ್ಲಿಯೂ ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಸರಕಾರಿ ಶಾಲೆಯ ಮಕ್ಕಳು ಕೂಡ ಯಕ್ಷಗಾನ ಕಲೆಯನ್ನು ಕಲಿಯುವ ಅವಕಾಶ ದೊರೆತಿರುವುದು ವಿದ್ಯಾರ್ಥಿಗಳ ಭಾಗ್ಯದ ಜೊತೆಗೆ ಕರಾವಳಿ ಭಾಗದ ಈ ವಿಶಿಷ್ಟ ಕಲೆಯನ್ನು ಉಳಿಸಿ ಬೆಳೆಸುವಂತಾಗಲಿದೆ.” ಎಂದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಪಟ್ಲ ಫೌಂಡೇಶನ್ (ರಿ) ಸಂಸ್ಥೆಯ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ ಮಾತನಾಡಿ, “ವಿದ್ಯಾರ್ಥಿ ದೆಸೆಯಲ್ಲಿ ಕಲಾಸ್ವಾದನೆಯ ಜೊತೆಗೆ ಕಲೆಗಳನ್ನು ಕರಗತ ಮಾಡಿಕೊಳ್ಳುವ ಆಸಕ್ತಿಯನ್ನು ಬೆಳೆಸಿಕೊಂಡಲ್ಲಿ ಬದುಕಿನ ದಾರಿಗೆ ಮೌಲ್ಯವನ್ನು ಕಂಡುಕೊಳ್ಳಬಹುದು” ಎಂದರು.
ಸಭಾ ವೇದಿಕೆಯಲ್ಲಿ ಆಸೀನರಾಗಿದ್ದ ಬಂಟ್ವಾಳ ತಾಲೂಕು ಘಟಕದ ಸಂಚಾಲಕರಾದ ಸಾಯಿಸುಮಾ ನಾವಡ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯ ಮಹತ್ವ ಮತ್ತು ಪರಿಣಾಮಕಾರಿ ಪ್ರಭಾವದ ಅರಿವನ್ನು ಮೂಡಿಸಿದರು. ಅತಿಥಿಗಳಾಗಿ ಆಗಮಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವಿಟ್ಲ ಘಟಕದ ಅಧ್ಯಕ್ಷರಾದ ಪೂವಪ್ಪ ಶೆಟ್ಟಿ ಮಾತನಾಡಿ, “ಯಕ್ಷ ಶಿಕ್ಷಣದ ಕನಸುಗಳು ಜಿಲ್ಲೆಯ ಗಡಿಯನ್ನು ಮೀರಿ ವಿಸ್ತರಿಸುವ ಮೂಲಕ ಯಕ್ಷಗಾನದ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಲು ಕಾರಣವಾಗಿದೆ. ಯಕ್ಷ ಶಿಕ್ಷಣದಲ್ಲಿ ಭಾಗಿಯಾದ ಎಲ್ಲಾ ವಿದ್ಯಾರ್ಥಿಗಳು ಪರಿಪೂರ್ಣವಾಗಿ ತೊಡಗಿಸಿಕೊಂಡು ಕಲೆಯ ಬೆಳವಣಿಗೆಗೆ ಕಾರಣರಾಗಬೇಕು.” ಎಂದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರತಿಭಾನ್ವಿತ ಯಕ್ಷಗಾನದ ವಿದ್ಯಾರ್ಥಿನಿ ಪ್ರತೀಕ್ಷ ಇವರಿಗೆ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಪಟ್ಲ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ನೀಡಿ ಅಭಿನಂದಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಶಿವಶಂಕರ ರಾವ್ ಮಾತನಾಡಿ, “ಮಂಚಿ ಶಾಲೆಯ ಮಕ್ಕಳು ನಿರಂತರವಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದು ಯಕ್ಷಗಾನದ ಯಕ್ಷ ಶಿಕ್ಷಣದ ಕನಸನ್ನು ಸಾಕಾರಗೊಳಿಸುತ್ತಿದ್ದಾರೆ.” ಎಂದರು.
ಯಕ್ಷಗಾನ ಗುರುಗಳಾದ ಕಟೀಲು ಮೇಳದ ಕಲಾವಿದ ಅಶ್ವತ್ಥ್ ಮಂಜನಾಡಿ ಯಕ್ಷ ಶಿಕ್ಷಣದ ವಿದ್ಯಾರ್ಥಿಗಳಿಗೆ ಹೆಜ್ಜೆಗಾರಿಕೆಯನ್ನು ಬೋಧಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವಿಟ್ಲ ಘಟಕದ ಗೌರವ ಸಲಹೆಗಾರರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಪ್ರಧಾನ ಸಂಚಾಲಕರಾದ ಸುಂದರ ಶೆಟ್ಟಿ, ಕಾರ್ಯದರ್ಶಿಗಳಾದ ಅರವಿಂದ ರೈ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು, ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಸುಶೀಲ ವಿಟ್ಲ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಕಲಾ ಶಿಕ್ಷಕ ಜಗನ್ನಾಥ ಪಿ ವಂದಿಸಿದರು. ಕಲಾವಿದ ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.