ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ: ಡಾ. ವಾಮನ್ ರಾವ್ ಬೇಕಲ್

ಕಾಸರಗೋಡು, ಜೂನ್ 20: ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಓದಿಗೆ ಮಾತ್ರ ಸೀಮಿತವಾಗದೆ ಜ್ಞಾನ ವಿಸ್ತರಣೆಗಾಗಿ ವಿವಿಧ ವಿದ್ವತ್ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಹಾಗೂ ಪ್ರತಿಯೊಂದು ಮನೆಯಲ್ಲಿ ಪುಟ್ಟ ಗ್ರಂಥಾಲಯ ಸ್ಥಾಪಿಸುವ ಮನೋಭಾವ ರೂಪಿಸಿಕೊಳ್ಳಬೇಕು ಎಂದು ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್ ಹೇಳಿದರು.

ನಗರದ ಬಿ.ಇ.ಎಂ. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಆಯೋಜಿಸಲಾದ ವಾಚನ ವಾರಾಚರಣೆಯ ಅಂಗವಾಗಿ ನಡೆದ ‘ಜೀವನದಲ್ಲಿ ಪುಸ್ತಕದ ಪ್ರಸ್ತುತತೆ’ ವಿಷಯದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಓದುವ ಸಂಸ್ಕೃತಿ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಜ್ಞಾನಾರ್ಜನೆಗೆ ಮಹತ್ವದ ಕೊಡುಗೆ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ಕೆ.ಪಿ. ರಾಜೇಶ್ ಚಂದ್ರ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ಭವನ ಗ್ರಂಥಾಲಯದ ವತಿಯಿಂದ ಡಾ. ವಾಮನ್ ರಾವ್ ಬೇಕಲ್ ಅವರು ಸುಮಾರು ₹3,000 ಮೌಲ್ಯದ ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಅಲ್ಲದೆ, ಶಾಲಾ ವಿದ್ಯಾರ್ಥಿಗಳನ್ನು ಕನ್ನಡ ಭವನ ಗ್ರಂಥಾಲಯಕ್ಕೆ ಆಹ್ವಾನಿಸಿ, ಪುಸ್ತಕ ಪರಿಚಯ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಷಾಜಿ ಕೆ.ಎನ್. ಸ್ವಾಗತಿಸಿದರು. ವೀಣಾ ಎಚ್. ಕಾರ್ಯಕ್ರಮ ನಿರೂಪಿಸಿದರೆ, ವಿದ್ಯಾರ್ಥಿ ಮುಖಂಡೆ ಅಂಜೆಲ್ ಮೇರಿ ಸಾಜನ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!