ಜೂನ್ 28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ: ಎಲ್ಲ ಇಲಾಖೆಗಳ ಸಹಕಾರ ಅಗತ್ಯ – ಆಯುಕ್ತ ರವಿಚಂದ್ರ ನಾಯಕ್

ಮಂಗಳೂರು, ಜೂ.22: ಜೂನ್ 28ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕೆ ಸಂಬಂಧಿತ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಸೂಚಿಸಿದರು.

ಮಹಾನಗರಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ನಗರ ಮಟ್ಟದ ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 0ರಿಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಪೋಲಿಯೋ ಲಸಿಕೆ ನೀಡಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಕಾರ್ಮಿಕರ ಮಕ್ಕಳಿಗೂ ಲಸಿಕೆ ತಲುಪುವಂತೆ ಕ್ರಮ ವಹಿಸಬೇಕು. ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪಲ್ಸ್ ಪೋಲಿಯೋ ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗಿದ್ದು, ಜೂನ್ 29ರಿಂದ ಜುಲೈ 1ರವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸಬೇಕು ಎಂದು ಸೂಚಿಸಿದರು.

ಮನೆಯಲ್ಲಿರುವ ನವಜಾತ ಶಿಶುಗಳನ್ನು ಗುರುತಿಸಿ ಅವರಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ನೀಡಬೇಕು. ತಾಯಂದಿರ ಸಭೆಗಳ ಮೂಲಕ ಲಸಿಕಾ ದಿನಾಂಕ ಹಾಗೂ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಡೆಂಗ್ಯೂ, ಮಲೇರಿಯಾ ನಿಯಂತ್ರಣಕ್ಕೆ ಒತ್ತು

ಸಭೆಯಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ನಿಯಂತ್ರಣ ಕುರಿತೂ ಚರ್ಚೆ ನಡೆಸಲಾಯಿತು. ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿತ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ರೋಗ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಆಯುಕ್ತರು ಸೂಚಿಸಿದರು.

ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ವಾರಕ್ಕೊಮ್ಮೆ ಲಾರ್ವಾ ವಿರೋಧಿ ಕಾರ್ಯಾಚರಣೆ ನಡೆಸಬೇಕು. ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗುವ ನಿಂತ ನೀರಿನ ಸಂಗ್ರಹವನ್ನು ತಡೆಯುವ ಮೂಲಕ ಡೆಂಗ್ಯೂ ಮತ್ತು ಮಲೇರಿಯಾ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಹೇಳಿದರು.

ಇತರ ಜಿಲ್ಲೆಗಳಿಂದ ಆಗಮಿಸುವ ಕಾರ್ಮಿಕರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಕಟ್ಟಡ ನಿರ್ಮಾಣ ಸಂಸ್ಥೆಗಳು ಆರೋಗ್ಯ ಜಾಗೃತಿ ಸಭೆಗಳನ್ನು ಆಯೋಜಿಸಿ, ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಿದರು.

ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಕಾರ್ಯಾಚರಣೆಗಳನ್ನು ನಿಯಮಿತವಾಗಿ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ, ವೆನ್‌ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್, ಆರ್‌ಸಿಎಚ್ ಅಧಿಕಾರಿ ರಾಜೇಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್ ಕುಲಾಲ್, ಡಾ. ಹರ್ಷಿತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!