ಮಂಗಳೂರು, ಜೂ.22: ಜಿಲ್ಲೆಯಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ವಿಳಂಬವಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 86 ಮಕ್ಕಳ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 79 ಮಕ್ಕಳು ಪತ್ತೆಯಾಗಿದ್ದಾರೆ. ಉಳಿದ ಪ್ರಕರಣಗಳಲ್ಲಿಯೂ ತ್ವರಿತ ತನಿಖೆ ನಡೆಸಿ ಮಕ್ಕಳನ್ನು ಪತ್ತೆಹಚ್ಚುವಂತೆ ಸೂಚಿಸಿದರು.
ಜಿಲ್ಲೆಯ 69 ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ 2,581 ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಅನಾಥಾಲಯಗಳು ಹಾಗೂ ವಿಶೇಷ ಮಕ್ಕಳ ಸಂಸ್ಥೆಗಳಿಗೆ ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮಕ್ಕಳಿಗೆ ಉತ್ತಮ ವಾಸ್ತವ್ಯ, ಆಹಾರ ಹಾಗೂ ಮೂಲಭೂತ ಸೌಲಭ್ಯಗಳು ದೊರೆಯುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳ ಸಹಾಯವಾಣಿ 1098ರ ಬಗ್ಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಜಾಗೃತಿ ಮೂಡಿಸಬೇಕು. ಕಳೆದ ಒಂದು ವರ್ಷದಲ್ಲಿ ಮಕ್ಕಳ ಸಹಾಯವಾಣಿಗೆ 763 ಕರೆಗಳು ಬಂದಿದ್ದು, ಪ್ರತಿಯೊಂದು ಪ್ರಕರಣವನ್ನೂ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.
ಪ್ರೀ-ಸ್ಕೂಲ್ಗಳ ನೋಂದಣಿಗೆ ಕ್ರಮ
ಜಿಲ್ಲೆಯಲ್ಲಿ ನರ್ಸರಿ, ಬೇಬಿ ಸಿಟಿಂಗ್ ಹಾಗೂ ಇತರೆ ಪ್ರೀ-ಸ್ಕೂಲ್ಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳ ನೋಂದಣಿ ಹಾಗೂ ಮೇಲ್ವಿಚಾರಣೆಗೆ ಅಗತ್ಯ ನಿಯಮ ರೂಪಿಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.
ರೈಲು ನಿಲ್ದಾಣಗಳಲ್ಲಿ ಮನೆ ಬಿಟ್ಟು ಬಂದ ಮಕ್ಕಳ ಪತ್ತೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಯಿತು.
ಹೋಟೆಲ್, ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಲ್ಲಿ ಬಾಲಕಾರ್ಮಿಕರ ನಿಯೋಜನೆ ತಡೆಯಲು ಕಾರ್ಮಿಕ ಇಲಾಖೆ ನಿರಂತರ ಪರಿಶೀಲನೆ ನಡೆಸಬೇಕು. ನಿಯಮ ಉಲ್ಲಂಘಿಸಿದ 92 ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, 49 ಪ್ರಕರಣಗಳಲ್ಲಿ ರೂ.3.06 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಪೋಕ್ಸೋ ಪ್ರಕರಣಗಳ 34 ಫಲಾನುಭವಿಗಳಿಗೆ ಬಾಲ ನ್ಯಾಯ ನಿಧಿಯಿಂದ ರೂ.1.70 ಲಕ್ಷ ನೆರವು ನೀಡಲಾಗಿದೆ. ಜಿಲ್ಲೆಯ ಎರಡು ದತ್ತು ಕೇಂದ್ರಗಳಲ್ಲಿ ಪ್ರಸ್ತುತ 20 ಮಕ್ಕಳು ಇದ್ದು, 2010ರಿಂದ ಇದುವರೆಗೆ 199 ಮಕ್ಕಳನ್ನು ದತ್ತು ನೀಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.
ಪ್ರಾಯೋಜಕತ್ವ ಯೋಜನೆಯಡಿ ಅನಾಥ, ಏಕ ಪೋಷಕ ಹಾಗೂ ಪೋಷಕರು ಜೈಲಿನಲ್ಲಿರುವ 1,035 ಮಕ್ಕಳಿಗೆ ತಿಂಗಳಿಗೆ ರೂ.4 ಸಾವಿರ ನೆರವು ನೀಡಲಾಗುತ್ತಿದೆ. ಹೆಚ್ಐವಿ/ಏಡ್ಸ್ ಸೋಂಕಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ಮಾಸಿಕ ರೂ.2 ಸಾವಿರ ಹಾಗೂ ಕೋವಿಡ್ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ತಿಂಗಳಿಗೆ ರೂ.3,500 ಸಹಾಯಧನ ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ರಾಜು ಕೆ. ಮಾತನಾಡಿ, ಹಾಸ್ಟೆಲ್ಗಳಲ್ಲಿ ವಾಸಿಸುವ ಹೆಣ್ಣು ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಕೌನ್ಸೆಲಿಂಗ್ಗೆ ಹೆಚ್ಚಿನ ಒತ್ತು ನೀಡಬೇಕು. ಲೈಂಗಿಕ ಶೋಷಣೆ ಅಥವಾ ಆರೋಗ್ಯ ಸಮಸ್ಯೆಗಳ ಮಾಹಿತಿ ದೊರೆತ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ಜೈಬುನ್ನೀಸಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.