ಯುಪಿಎಸ್‌ಸಿ ಪರೀಕ್ಷೆಗೆ ಮಾರ್ಗದರ್ಶನ: ಜೂನ್ 28ರಂದು ‘ಮಾರ್ಗದರ್ಶಿ’ ಕಾರ್ಯಕ್ರಮ

ಮಂಗಳೂರು IAS, ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ರಾಮಕೃಷ್ಣ ಮಿಷನ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಾಗರಿಕ ಸೇವಾ ಪರೀಕ್ಷಾ ಆಕಾಂಕ್ಷಿಗಳಿಗಾಗಿ “ಮಾರ್ಗದರ್ಶಿ – Cracking the UPSC Examination” ವಿಶೇಷ ಮಾರ್ಗದರ್ಶನ ಕಾರ್ಯಕ್ರಮವು ಜೂನ್ 28ರಂದು ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಿಷನ್ ಸಭಾಂಗಣದಲ್ಲಿ ನಡೆಯಲಿದೆ ಎಂದು
ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ರೊಯ್ ಕ್ಯಾಸ್ಟೆಲಿನೊ ತಿಳಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಯುಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ, ಪ್ರೇರಣೆ ಮತ್ತು ಸ್ಪಷ್ಟ ದಿಕ್ಕುನಿರ್ದೇಶನ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಿಷನ್ ಮಂಗಳೂರು ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅರುಣ್ ಜೇಜಿ ಚಕ್ರವರ್ತಿ (ಐಪಿಎಸ್), ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ (ಐಪಿಎಸ್) ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ್ ಸೋಮನಾಥ್ ವಿಭೂತೆ (ಐಎಫ್‌ಎಸ್) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಯುಪಿಎಸ್‌ಸಿ ಮಾಸ್ಟರ್ ಟ್ರೈನರ್‌ಗಳಾದ ಮೋಹನ್ ಕೃಷ್ಣಮೂರ್ತಿ ಮತ್ತು ಚಂದ್ರಮೋಹನ್ ಇನಗಂಟಿ, ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಮನಾ ಬಿ., ಗೂಗಲ್ ಹಾಗೂ ಮೈಕ್ರೋಸಾಫ್ಟ್ ಪ್ರಮಾಣಿತ ಶಿಕ್ಷಣ ತಜ್ಞ ಡಾನ್ ಪ್ರಕಾಶ್ ಮತ್ತು ಮಂಗಳೂರು IAS ಸಂಸ್ಥಾಪಕ ಸಂತೋಷ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಯುಪಿಎಸ್‌ಸಿ ಪರೀಕ್ಷೆಯ ಮಾದರಿ, ಪರಿಣಾಮಕಾರಿ ಅಧ್ಯಯನ ತಂತ್ರಗಳು, ಸಮಯ ನಿರ್ವಹಣೆ, ಉತ್ಪಾದಕತೆ ವೃದ್ಧಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಸಾಮಾನ್ಯವಾಗಿ ಮಾಡುವ ತಪ್ಪುಗಳು, ತಜ್ಞರೊಂದಿಗೆ ನೇರ ಪ್ರಶ್ನೋತ್ತರ, ಪ್ರೇರಣಾತ್ಮಕ ಮಾರ್ಗದರ್ಶನ ಹಾಗೂ ವೃತ್ತಿ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿಶೇಷ ಉಪನ್ಯಾಸಗಳು ನಡೆಯಲಿವೆ.

ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ರೊಯ್ ಕ್ಯಾಸ್ಟೆಲಿನೊ ಹಾಗೂ ಮಂಗಳೂರು IAS ಸಂಸ್ಥಾಪಕ ಸಂತೋಷ್ ರಾವ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯವಾದ ಸರಿಯಾದ ತಯಾರಿ ವಿಧಾನ ಮತ್ತು ಮಾರ್ಗದರ್ಶನ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಎಲ್ಲಾ ಅಧಿವೇಶನಗಳಿಗೆ ಪ್ರವೇಶ, ಊಟದ ವ್ಯವಸ್ಥೆ, ಇ-ಪ್ರಮಾಣಪತ್ರ ಹಾಗೂ ಭವಿಷ್ಯದ ವಿದ್ಯಾರ್ಥಿವೇತನ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ನಾಗರಿಕ ಸೇವೆ ಮತ್ತು ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಆಸನಗಳು ಸೀಮಿತವಾಗಿರುವ ಕಾರಣ ಮೊದಲು ನೋಂದಾಯಿಸುವವರಿಗೆ ಆದ್ಯತೆ ನೀಡಲಾಗುವುದು. ನೋಂದಣಿ ಶುಲ್ಕ ರೂ.200 ನಿಗದಿಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು IAS ಸಂಸ್ಥಾಪಕ ಸಂತೋಷ್ ರಾವ್, ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಆ್ಯಂಡ್ ಎಜುಕೇಶನ್ ನಿರ್ದೇಶಕ ಫಾ. ರೋಶನ್ ರೊಸಾರಿಯೊ OFM (CAP), ಹಾಗೂ ಕಾರ್ಯದರ್ಶಿ ಆ್ಯಲ್ರನ್ ರೊಡ್ರಿಗಸ್ , ಸದಸ್ಯರಾದ ಜೆನಿಫರ್ ಜಾಸ್ಮಿನ್ ಲೋಬೋ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!