ಮಂಗಳೂರು, ಆ.7: ಕರಾವಳಿಯಲ್ಲಿ ಯಕ್ಷಗಾನದ ತಾಳಮದ್ದಳೆ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಅಮೃತ ಯಕ್ಷಮಿತ್ರ ಬಳಗ ತನ್ನ ಯಶಸ್ವಿ 10ನೇ ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ, ದಶಮಾನೋತ್ಸವ ಅಂಗವಾಗಿ ‘ಅಮೃತ ಯಕ್ಷಯಾನ’ ಕಾರ್ಯಕ್ರಮವನ್ನು ಆಗಸ್ಟ್ 15ರಂದು ಬೆಳಿಗ್ಗೆ 10 ಗಂಟೆಯಿಂದ ಮರೋಳಿಯ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಸೂರ್ಯರಶ್ಮಿ ಪ್ರಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಬಳಗದ ಪ್ರಮುಖರಾದ ಕದ್ರಿ ನವನೀತ ಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಳಮದ್ದಳೆಯ ಸಂಘಗಳು ಯಕ್ಷಗಾನದ ಮೂಲ ಸ್ವರೂಪವನ್ನು ಉಳಿಸಿ ಬೆಳೆಸುವ ಪ್ರಮುಖ ಕೇಂದ್ರಗಳಾಗಿವೆ. ಈ ಸಂಘಗಳ ಮೂಲಕ ಅನೇಕ ಕಲಾವಿದರು ರೂಪುಗೊಂಡಿದ್ದು, ಕಲಾಸಕ್ತರು ಹಾಗೂ ಕಲಾಪೋಷಕರು ಬೆಳೆದು ಕರಾವಳಿಯಲ್ಲಿ ಯಕ್ಷಗಾನದ ಬೆಳವಣಿಗೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಒಂದು ಕಾಲಘಟ್ಟದಲ್ಲಿ ತಾಳಮದ್ದಳೆಯ ಸಂಘಗಳಿಗೆ ಹಿಮ್ಮೇಳ ಕಲಾವಿದರ ಕೊರತೆ ದೊಡ್ಡ ಸವಾಲಾಗಿತ್ತು. ಭಾಗವತರು, ಚಂಡೆ ಹಾಗೂ ಮದ್ದಳೆ ವಾದಕರು ಸಮಯಕ್ಕೆ ಸರಿಯಾಗಿ ಲಭ್ಯವಾಗದ ಕಾರಣ ವಾರದ ತಾಳಮದ್ದಳೆ ಕೂಟಗಳನ್ನು ನಡೆಸುವುದು ಕಷ್ಟಕರವಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಯಕ್ಷಗಾನದ ಹಿಮ್ಮೇಳ ಕಲಾವಿದರನ್ನು ತರಬೇತುಗೊಳಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಯಕ್ಷಗಾನ ಗುರು ಬಿ.ಎನ್. ಅಶೋಕ್ ಬೋಳೂರು ರೂಪಿಸಿದರು ಎಂದು ತಿಳಿಸಿದರು.
ಸುಮಾರು ಹತ್ತು ವರ್ಷಗಳ ಹಿಂದೆ ಮರುಳು ಶ್ರೀ ಸೂರ್ಯನಾರಾಯಣ ದೇವಸ್ಥಾನದ ಸಮೀಪದ ‘ಗಣೇಶ ಕೃಪ’ ನಿವಾಸದಲ್ಲಿ ಈ ಕಾರ್ಯಕ್ಕೆ ಚಾಲನೆ ದೊರೆಯಿತು. ಗಣೇಶ ಕೃಪ ನಿವಾಸದ ಮಾಲೀಕರಾದ ವೆಂಕಟೇಶ ಐತಾಳ್, ವೃತ್ತಿಯಲ್ಲಿ ಪೌರೋಹಿತ್ಯ ಹಾಗೂ ಜ್ಯೋತಿಷ್ಯ ಕ್ಷೇತ್ರದಲ್ಲಿದ್ದರೂ, ಯಕ್ಷಗಾನದ ಮೇಲಿನ ಅಪಾರ ಪ್ರೀತಿ ಹೊಂದಿದ ಕಲಾಪೋಷಕರಾಗಿದ್ದರು. ಅವರ ಪತ್ನಿ ಶೋಭಾ ಐತಾಳ್ ಸಂಗೀತ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವ ಕನಸನ್ನು ಹೊಂದಿದ್ದರು. ಅವರ ಆಸಕ್ತಿಗೆ ಅಶೋಕ್ ಬೋಳೂರು ಅವರ ಮಾರ್ಗದರ್ಶನ ದೊರೆಯಿತು ಎಂದು ವಿವರಿಸಿದರು.

ಗಣೇಶ ಕೃಪದಲ್ಲೇ ತರಬೇತಿ ಕೇಂದ್ರವನ್ನು ಆರಂಭಿಸಿ, ಭಾಗವತಿಕೆ, ಹಿಮ್ಮೇಳ ಹಾಗೂ ನಾಟ್ಯಾಭ್ಯಾಸವನ್ನು ನಡೆಸಲಾಯಿತು. ಆರಂಭಿಕ ತಂಡವು ಸಿದ್ಧಗೊಂಡು ಅಮೃತ ಕಾಲೇಜಿನಲ್ಲಿ ಮೊದಲ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಸಂಸ್ಥೆಗೆ ‘ಅಮೃತ ಯಕ್ಷಮಿತ್ರ ಬಳಗ’ ಎಂಬ ಹೆಸರನ್ನು ನೀಡಲಾಯಿತು ಎಂದು ಹೇಳಿದರು.
ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಭಜನಾ ಕಾರ್ಯಕ್ರಮ, ‘ಶ್ರೀ ಶನೀಶ್ವರ ಮಹಾತ್ಮೆ’ ಯಕ್ಷಗಾನ ತಾಳಮದ್ದಳೆ, ಹಾಗೂ ಯಕ್ಷಗಾನ ಗುರು ಬಿ.ಎನ್. ಅಶೋಕ್ ಬೋಳೂರು ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನ ಕಲಾವಿದರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಳಗದ ಪ್ರಮುಖರಾದ ಸುರಭಿ ಎಂಟರ್ಪ್ರೈಸ್ ಮಾಲಕ ಶ್ರೀ ಶಿವಪ್ರಸಾದ್ ಪ್ರಭು , ವೆಂಕಟೇಶ ಐತಾಳ್, ಶೋಭಾ ಐತಾಳ್ ಹಾಗೂ ಬಿ.ಎನ್. ಅಶೋಕ್ ಬೋಳೂರು ಉಪಸ್ಥಿತರಿದ್ದರು.

