“ಹಸಿವಿಲ್ಲದ, ಭಯವಿಲ್ಲದ ಭಾರತ ನಿರ್ಮಾಣವೇ ಪಕ್ಷದ ಗುರಿ” – ನಾಸರ್ ಬಂಬ್ರಾಣ
ಮಂಜೇಶ್ವರ, ಜೂನ್ 21: ಎಸ್ಡಿಪಿಐಯ 18ನೇ ಸಂಸ್ಥಾಪನಾ ದಿನದ ಅಂಗವಾಗಿ ಮಂಜೇಶ್ವರ ಮಂಡಲ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಿತು. ಈ ಸಂದರ್ಭದಲ್ಲಿ ಕೊಪ್ಪಳದಲ್ಲಿ ನೂತನ ಬ್ರಾಂಚ್ ಕಚೇರಿಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್ಡಿಪಿಐ ಮಂಜೇಶ್ವರ ಮಂಡಲ ಅಧ್ಯಕ್ಷ ನಾಸರ್ ಬಂಬ್ರಾಣ, ಕಳೆದ ಹದಿನೆಂಟು ವರ್ಷಗಳಿಂದ ಪಕ್ಷವು ದೇಶದ ದಲಿತ, ಹಿಂದುಳಿದ ಹಾಗೂ ಅಂಚಿನಲ್ಲಿರುವ ಸಮುದಾಯಗಳ ರಾಜಕೀಯ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.
“ಹಸಿವಿಲ್ಲದ, ಭಯವಿಲ್ಲದ ಭಾರತ” ನಿರ್ಮಾಣ ಮಾಡುವುದು ಪಕ್ಷದ ಮೂಲ ಧ್ಯೇಯವಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಭದ್ರತೆ ಹಾಗೂ ಘನತೆಯಿಂದ ಬದುಕುವ ಅವಕಾಶ ಕಲ್ಪಿಸುವ ಸಾಮಾಜಿಕ-ರಾಜಕೀಯ ವ್ಯವಸ್ಥೆ ನಿರ್ಮಾಣಕ್ಕಾಗಿ ಎಸ್ಡಿಪಿಐ ಹೋರಾಟ ನಡೆಸುತ್ತಿದೆ ಎಂದು ಅವರು ತಿಳಿಸಿದರು.
ಬ್ರಾಂಚ್ ಅಧ್ಯಕ್ಷ ನೌಮನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಂಡಲ ಕಾರ್ಯದರ್ಶಿ ಶಬೀರ್ ಪೊಸೊಟ್, ಸಕರಿಯ ಉದ್ಯಾವರ, ಶಂಸು ಮಂಜೇಶ್ವರ, ಹಬೀಬ್, ಇಲಿಯಾಸ್, ರಿಯಾಜ್ ಪಡಿಂಜಾರ್, ಅಬ್ದುಲ್ ಮುತ್ತಲಿಬ್ ಹಾಗೂ ಬಾಸಿತ್ ಕೋಪ್ಪಳ್ಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂಸ್ಥಾಪನಾ ದಿನದ ಅಂಗವಾಗಿ ಮಂಡಲ, ಪಂಚಾಯತ್ ಹಾಗೂ ಬ್ರಾಂಚ್ ಕಚೇರಿಗಳಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಲಾಯಿತು. ಅಲ್ಲದೆ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿ, ಸಿಹಿ ಹಂಚುವ ಮೂಲಕ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.