ಅನಂತಪುರ, ಜೂನ್ 23: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಮುಂಬರುವ ಬ್ರಹ್ಮಕಲಶೋತ್ಸವದ ಸಿದ್ಧತೆಗಳು ಆರಂಭಗೊಂಡಿವೆ. ಇದರ ಅಂಗವಾಗಿ ಭಕ್ತರು ಹಾಗೂ ಸೇವಾ ಸಮಿತಿಯ ಸದಸ್ಯರ ಮಹಾಸಭೆಯನ್ನು ಆಯೋಜಿಸಲಾಗಿದೆ.
ಮಹಾಸಭೆಯು ಜೂನ್ 28, 2026ರಂದು ಬೆಳಿಗ್ಗೆ 10 ಗಂಟೆಗೆ ಅನಂತಪುರ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ.
ಸಭೆಯಲ್ಲಿ ಬ್ರಹ್ಮಕಲಶೋತ್ಸವದ ಸಿದ್ಧತೆಗಳು, ವಿವಿಧ ಧಾರ್ಮಿಕ ಹಾಗೂ ಸೇವಾ ಕಾರ್ಯಕ್ರಮಗಳ ರೂಪುರೇಷೆ, ಭಕ್ತರ ಸಹಭಾಗಿತ್ವ ಹಾಗೂ ಸೇವಾ ಕಾರ್ಯಗಳ ಕುರಿತು ಸಮಾಲೋಚನೆ ನಡೆಯಲಿದೆ.
ದೇವಸ್ಥಾನದ ಆಡಳಿತ ಮಂಡಳಿಯು ಸಮಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಬ್ರಹ್ಮಕಲಶೋತ್ಸವದ ಯಶಸ್ಸಿಗೆ ಸಹಕರಿಸುವಂತೆ ಮನವಿ ಮಾಡಿದೆ.