ಪುತ್ತೂರು, ಜೂನ್ 25: ತುಳುನಾಡಿನ ಅಪರೂಪದ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ‘ಪ್ರೇತ ವಿವಾಹ’ (ಕುಲೆತ ಮದಿಮೆ) ಕಾರ್ಯಕ್ರಮವು ಪುತ್ತೂರು ತಾಲೂಕಿನ ಮುಂಡೂರಿನಲ್ಲಿ ಸಂಪ್ರದಾಯಬದ್ಧವಾಗಿ ನೆರವೇರಿತು.
ವಿವಾಹವಾಗದೆ ಮೃತಪಟ್ಟಿದ್ದ ಆನಂದ ಹಾಗೂ ಸರೋಜಾ ಅವರ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಕುಟುಂಬದಲ್ಲಿನ ದೋಷಗಳು ನಿವಾರಣೆಯಾಗಲಿ ಎಂಬ ನಂಬಿಕೆಯಿಂದ ಸುಮಾರು 25 ವರ್ಷಗಳ ಬಳಿಕ ಈ ವಿವಾಹ ಸಂಸ್ಕಾರ ನಡೆಸಲಾಯಿತು. ನಿಶ್ಚಿತಾರ್ಥ, ಧಾರೆ, ಮಾಂಗಲ್ಯ ಧಾರಣೆ ಸೇರಿದಂತೆ ಸಾಮಾನ್ಯ ಮದುವೆಯಲ್ಲಿ ನಡೆಯುವ ಎಲ್ಲ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ಅನುಸರಿಸಲಾಯಿತು.
ಜ್ಯೋತಿಷ್ಯರ ಸಲಹೆ ಮತ್ತು ಪ್ರಶ್ನಾ ಚಿಂತನೆಯ ಆಧಾರದಲ್ಲಿ, ಅತೃಪ್ತ ಆತ್ಮದಿಂದ ಕುಟುಂಬದಲ್ಲಿ ಸಮಸ್ಯೆಗಳು ಉಂಟಾಗುತ್ತಿವೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಪ್ರೇತ ವಿವಾಹ ಆಯೋಜಿಸಲಾಗಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಧರ್ಮಪಾಲ ಶೇಣಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಳೆದಿಂಡು ಹಾಗೂ ಮಣ್ಣಿನ ಪಾತ್ರೆಗಳಿಂದ ವಧು-ವರರ ಪ್ರತೀಕ ರೂಪಗಳನ್ನು ಸಿದ್ಧಪಡಿಸಿ ವಿವಾಹ ನೆರವೇರಿಸಲಾಯಿತು. ಬಳಿಕ ಬಂಧು-ಬಳಗ ಮತ್ತು ಗ್ರಾಮಸ್ಥರಿಗೆ ಮದುವೆ ಊಟದ ವ್ಯವಸ್ಥೆಯೂ ಮಾಡಲಾಗಿತ್ತು.
ತುಳುನಾಡಿನ ವಿಶಿಷ್ಟ ಜನಪದ ನಂಬಿಕೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಈ ಅಪರೂಪದ ಆಚರಣೆ ಸ್ಥಳೀಯರ ಗಮನ ಸೆಳೆಯಿತು.