ಕಡಬದಲ್ಲಿ ಜೂನ್ 26ರಿಂದ ಮೂರು ದಿನಗಳ ‘ಹಲಸು ಮೇಳ–ಕೃಷಿ ಉತ್ಸವ’

ಕಡಬ, ಜೂನ್ 25: ಜೆಸಿಐ ಕಡಬ ಕದಂಬ ಹಾಗೂ ರೈತಕುಡ್ಲ ಪ್ರತಿಷ್ಠಾನದ ಆಶ್ರಯದಲ್ಲಿ ಜೂನ್ 26ರಿಂದ 28ರವರೆಗೆ ಕಡಬದ ಅನುಗ್ರಹ ಸಭಾಂಗಣದಲ್ಲಿ ‘ಹಲಸು ಮೇಳ–ಕೃಷಿ ಉತ್ಸವ’ ಆಯೋಜಿಸಲಾಗಿದೆ ಎಂದು ರೈತಕುಡ್ಲ ಪ್ರತಿಷ್ಠಾನದ ಮುಂದಾಳು ಜೇಸಿ ಸುಹಾಸ್ ಮರಿಕೆ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕೃಷಿ ಸಂಘಟನೆಗಳು, ಸಹಕಾರ ಸಂಘಗಳು ಹಾಗೂ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುವ ಈ ಉತ್ಸವದಲ್ಲಿ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳು, ಸಾವಯವ ಉತ್ಪನ್ನಗಳು, ಹಣ್ಣು ಮತ್ತು ಹೂವಿನ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ ಎಂದರು.

ಜೂನ್ 26ರಂದು ಹಿರಿಯ ಕೃಷಿಕ ಪಿ. ವಿಶ್ವೇಶ್ವರ ಭಟ್ ಎಲಿಯೂರು ಮಳಿಗೆಯನ್ನು ಉದ್ಘಾಟಿಸಲಿದ್ದು, ಸಾಯಂಕಾಲ ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಂತಾರಾಷ್ಟ್ರೀಯ ಹಲಸು ರಾಯಭಾರಿ ಶ್ರೀಪಡ್ರೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

ಜೂನ್ 27ರಂದು ಹಣ್ಣು ಬೆಳೆಗಾರ ಕೃಷ್ಣ ಶೆಟ್ಟಿ ಅವರೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ಜೂನ್ 28ರಂದು ಕಸಿ ಕಟ್ಟುವ ತರಬೇತಿ, ಹಲಸು ಭಾರ ಎತ್ತುವ ಮತ್ತು ಹಲಸು ಬಿಡಿಸುವ ಸ್ಪರ್ಧೆಗಳು ನಡೆಯಲಿವೆ.

ವಿಶೇಷ ಆಕರ್ಷಣೆಯಾಗಿ ವಿವಿಧ ತಳಿಯ ಹಲಸು, ಸಾವಯವ ಮಾವು, ಹಲಸಿನ ಹಪ್ಪಳ, ಚಿಪ್ಸ್, ಜಾಮ್ ಸೇರಿದಂತೆ ಹಲವಾರು ಕೃಷಿ ಮತ್ತು ಆಹಾರ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಕೃಷಿಕರ ಅಪರೂಪದ ಬೆಳೆಗಳ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದ್ದು, ಅತ್ಯುತ್ತಮ ಬೆಳೆಗೆ ನಗದು ಬಹುಮಾನ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!