ಉಡುಪಿ: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಶಂಸನೀಯವಾಗಿದ್ದು, ಗ್ರಾಮಸ್ಥರು ಮತ್ತು ಭಕ್ತರು ಈ ಪುಣ್ಯ ಕಾರ್ಯಕ್ಕೆ ಸಹಕಾರ ನೀಡುವ ಮೂಲಕ ದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಗಳು ಕರೆ ನೀಡಿದರು.
ಪೆರ್ಡೂರಿನಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕಾರ್ಯಾಲಯವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ದೇವರಿಗಿಂತಲೂ ಭಕ್ತರ ಕಲ್ಯಾಣಕ್ಕಾಗಿ ನಡೆಯುವ ಕಾರ್ಯವಾಗಿದೆ. ದೇವರ ಸೇವೆ ಮತ್ತು ಆರಾಧನೆಯನ್ನು ಕರ್ತವ್ಯ ಭಾವದಿಂದ ಮಾಡಿದಾಗ ದೇವರ ಅನುಗ್ರಹ ಲಭಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ತ್ರಿಡಿ ವಿಡಿಯೋವನ್ನು ಅನಾವರಣಗೊಳಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶಾಂತರಾಮ ಸೂಡ ಕೆ. ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸೇವಾ ಕಚೇರಿಯನ್ನು ಉದ್ಘಾಟಿಸಿದರೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಜೀರ್ಣೋದ್ಧಾರದ ಯೋಜಿತ ಮಾದರಿಯನ್ನು ಅನಾವರಣಗೊಳಿಸಿದರು. ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದರು.
ತುಳುಕೂಟ ಬೆಂಗಳೂರು ಅಧ್ಯಕ್ಷ ಬಿ. ದಿನೇಶ್ ಹೆಗ್ಡೆ ಯೋಜನಾ ವಿಡಿಯೋ ಅನಾವರಣಗೊಳಿಸಿದರು. ಹಿರಿಯ ಅರ್ಚಕ ಹಾಗೂ ಸಮಿತಿಯ ಗೌರವಾಧ್ಯಕ್ಷ ಪಿ. ಕೃಷ್ಣ ಅಡಿಗ ಗಣಕಯಂತ್ರಕ್ಕೆ ಚಾಲನೆ ನೀಡಿದರು. ತಂತ್ರಿಗಳಾದ ಕೆ.ಜಿ. ವಿಠಲ ತಂತ್ರಿ, ಕೆ.ಪಿ. ಕುಮಾರಗುರು ತಂತ್ರಿ, ವಾಸ್ತುತಜ್ಞ ಸುಬ್ರಹ್ಮಣ್ಯ ಭಟ್ ಗುಂಡಿಬೈಲು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಕಾರ್ಯನಿರ್ವಹಣಾಧಿಕಾರಿ ಗುರುರಾಜ್ ಪಿ.ಆರ್. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಲಾಲ್ ಪಕ್ಕಾಲ್ ಸ್ವಾಗತಿಸಿದರು.